ಟ್ರೋಲ್ ಪೇಜ್ ಗಳ ಮಿತಿಮೀರಿದ ವರ್ತನೆ...ಕಾನೂನಿನ ಕಡಿವಾಣ ಅಗತ್ಯವೇ?
ಟ್ರೋಲ್...ಕೆಲವೇ ವರ್ಷಗಳ ಹಿಂದೆ ಈ ಪದ ಜನರಿಗೆ ಹೆಚ್ಚು ಪರಿಚಿತವಾಗಿರಲಿಲ್ಲ. ಫೇಸ್ಬುಕ್, ವಾಟ್ಸಾಪ್ ನಂಥ ಸಾಮಾಜಿಕ ಜಾಲತಾಣಗಳು ಹೆಚ್ಚೆಚ್ಚು ಜನಪ್ರಿಯಗೊಂಡಂತೆ ಟ್ರೋಲ್ ಸಂಸ್ಕ್ರತಿ ಹೆಚ್ಚಾಯಿತು. ಇತ್ತೀಚೆಗಂತೂ ಟ್ರೋಲ್ ಪೇಜ್ ಗಳು
ಎಂದರೆ ಒಂದು ಕ್ಷಣ ಭಯಪಡುವಂತಾಗಿದೆ. ಈ ಟ್ರೋಲ್ ಪೇಜ್ ಗಳು ಯಾರನ್ನು, ಯಾವಾಗ ,ಯಾವ ವಿಷಯಕ್ಕೆ ಟ್ರೋಲ್ ಮಾಡುತ್ತವೆಂದು ಹೇಳಲಾಗುವುದಿಲ್ಲ. ರಾತ್ರಿ ಕಳೆದು ಬೆಳಗಾಗುವುದರೊಳಗೆ ಝಿರೋ ಆಗಿರುವನನ್ನು ಹಿರೋ ಮಾಡುವ ಹಾಗೂ ಹಿರೋ ಆಗಿರುವನನ್ನು ಝಿರೋ ಮಾಡುವ ಶಕ್ತಿ ಈ ಟ್ರೋಲ್ ಪೇಜ್ ಗಳಿಗಿದೆ. ಅಭಿವ್ಯಕ್ತಿ ಸ್ವಾತಂತ್ರ್ಯದ ಹೆಸರಿನಲ್ಲಿ ಇನ್ನೊಬ್ಬರ ಮಾನಹಾನಿಯನ್ನು ಲೆಕ್ಕಿಸದೆ ವೈಯಕ್ತಿಕ ತೆಜೋವಧೆಗೆ ಮುಂದಾಗುತ್ತಿರುವ ಈ ಟ್ರೋಲ್ ಪೇಜ್ ಗಳನ್ನು ಕಾನೂನಿನ ಚೌಕಟ್ಟಿನಲ್ಲಿ ತರಬೇಕು ಎಂಬ ಚರ್ಚೆ ದೇಶದಲ್ಲಿ ಮುನ್ನೆಲೆಗೆ ಬಂದಿದೆ.
ಮೊದಲಿಗೆ ಲಘುಹಾಸ್ಯದ , ಲೇವಡಿಯ ರೂಪ ಹೊತ್ತುಕೊಂಡು ಬಂದಿದ್ದ ಈ ಟ್ರೋಲ್ ಗಳು ಬರಬರುತ್ತಾ ದ್ವೇಷ ಸಾಧನೆಗೆ , ಇನ್ನೊಬ್ಬರ
ತೆಜೋವಧೆಗೆ ಬಳಕೆಯಾಗುತ್ತಿರುವುದು ನಿಜಕ್ಕೂ ದುರಂತ.ಅದರಲ್ಲೂ ರಾಜಕೀಯ ,ಧರ್ಮದ ವಿಚಾರದಲ್ಲಿ ಈ ಟ್ರೋಲ್ ಗಳು ಹೆಚ್ಚು ಬಳಕೆಯಾಗುತ್ತೀವೆ. ತಮ್ಮಲ್ಲಿರುವ ಬೌದ್ಧಿಕ ಸಾಮರ್ಥ್ಯವೇ ಈ ಟ್ರೋಲ್ ಪೇಜ್ ಗಳಿಗೆ ಬಂಡವಾಳ. ತಮ್ಮೆಲ್ಲಾ ಬುದ್ಧಿಶಕ್ತಿಯನ್ನು ಉಪಯೋಗಿಸಿ ಟ್ರೋಲ್ ಗಳನ್ನು ಸೃಷ್ಟಿಸಿ ಎದುರಾಳಿಗಳನ್ನು ಬಗ್ಗುಬಡಿಯುತ್ತಿದ್ದಾರೆ. ಸರ್ಕಾರದ ಜನವಿರೋಧಿ ನೀತಿಗಳನ್ನು ವ್ಯಂಗವಾಗಿ ಟೀಕಿಸುವ ಮೂಲಕ ಸಮಾಜಮುಖಿಯಾಗಬೇಕಿದ್ದ ಟ್ರೋಲ್ ಪೇಜ್ ಗಳು ಇಂದು ಧರ್ಮಾಧಾರಿತ ಟ್ರೋಲ್ ಗಳ ಮೂಲಕ ಸಮಾಜದಲ್ಲಿ ಕೋಮುದ್ವೇಷ ಹೆಚ್ಚಾಗುವಂತೆ ಮಾಡುತ್ತಿದ್ದಾರೆ. ಇನ್ನು ಈ ಟ್ರೋಲ್ ಗಳ ಮಹತ್ವ ಅರಿತಿರುವ ರಾಜಕೀಯ ನಾಯಕರು ಹಾಗೂ ಪಕ್ಷಗಳು ಎದುರಾಳಿಗಳನ್ನು ಹೆಣೆಯಲು ದುಡ್ಡು ಕೊಟ್ಟು ಟ್ರೋಲ್ ಮಾಡಿಸುತ್ತಾರೆ. ಈ ರೀತಿಯಾಗಿ ದುಡ್ಡು ತೆಗೆದುಕೊಂಡು ಬೇರೆಯವರನ್ನು ಟ್ರೋಲ್ ಮಾಡುವ ದೊಡ್ಡ ಗುಂಪೇ ಇದೆ.
ಹೌದು, ಈಗ್ಯಾಕೆ ಟ್ರೋಲ್ ಗಳ ಬಗ್ಗೆ ಇಷ್ಟೊಂದೆಲ್ಲಾ ಬರಿತ್ತೀದ್ದೀನಿ ಅಂತಾ ಯೋಚನೆ ಮಾಡ್ತಿದ್ದೀರಾ...ಅದಕ್ಕೆ ಕಾರಣ ಪಬ್ಲಿಕ್ ಟಿವಿಯ ಮಖ್ಯಸ್ಥ ಎಚ್.ಆರ್ ರಂಗನಾಥ ಅವರನ್ನು ಇತ್ತೀಚಿಗೆ ಟ್ರೋಲ್ ಮಾಡಿದ್ದು. ಪಬ್ಲಿಕ್ ಟಿವಿಯಲ್ಲಿ ಪ್ರಸಾರವಾದ " ಹೆಲಿಕಾಪ್ಟರ್ ಮನಿ " ಕಾರ್ಯಕ್ರಮ ಟ್ರೋಲ್ ಪೇಜ್ ಗಳಿಗೆ ಆಹಾರವಾಗಿತ್ತು. ಪ್ರಧಾನಿ ಮೋದಿ ಹೆಲಿಕಾಪ್ಟರ್ ನಲ್ಲಿ ಹಣ ತಂದು ದೇಶದಲ್ಲಿ ಸುರಿತಾರೆ ಎಂದು ಪಬ್ಲಿಕ್ ಟಿವಿ ಪ್ರಸಾರ ಮಾಡಿದೆ ಎನ್ನುವಂತೆ ಟ್ರೋಲ್ ಪೇಜ್ ಗಳು ಬಿಂಬಿಸಿದ್ದವು. ಆದರೆ ಆ ಕಾರ್ಯಕ್ರಮದಲ್ಲಿ ಆ ರೀತಿಯಾದ ಯಾವ ತಪ್ಪು ಮಾಹಿತಿಯನ್ನು ಪಬ್ಲಿಕ್ ಟಿವಿ ನೀಡಿರಲಿಲ್ಲ.ಈ ಬಗ್ಗೆ ಟ್ರೋಲ್ ಪೇಜ್ ಅಡ್ಮಿನ್ ಗಳಿಗೆ ತಿಳಿದಿಲ್ಲ ಎಂದೇನಿಲ್ಲ. ಆದರೂ ಸುಳ್ಳನ್ನೇ ಸತ್ಯವೆಂಬಂತೆ ಬಿಂಬಿಸಿ ರಂಗನಾಥ್ ಅವರನ್ನು ಟ್ರೋಲ್ ಮಾಡಿದರು. ರಂಗನಾಥ್ ಅವರ ವಿರುಧ್ಧ ಅದ್ಯಾವ ಮಟ್ಟಿಗೆ ಆಕ್ರೋಶವಿತ್ತೆಂದರೆ, ಪಬ್ಲಿಕ್ ಟಿವಿಯನ್ನೇ ಬ್ಯಾನ್ ಮಾಡಬೇಕೆಂದು ಷರಾ ಬರೆದರು.
ನನ್ನ ಪ್ರಕಾರ ಈ ರೀತಿಯ ಟ್ರೋಲ್ ಗೆ ಎರಡು ಕಾರಣಗಳಿರಬಹುದು. ಒಂದು ವ್ಯಕ್ತಿಯೋಬ್ಬರ ಮೇಲೆ ವೈಯಕ್ತಿಕ ದ್ವೇಷವಿದ್ದು ಅವನ ತೆಜೋವಧೇ ಮಾಡಲೇ ಬೇಕೆಂದು ನಿರ್ಧರಿಸಿದಾಗ ಇಲ್ಲಾ ಆ ವ್ಯಕ್ತಿಯನ್ನು ಅವಹೇಳನ ಮಾಡಿ ಆ ಮೂಲಕ ತನ್ನ ಟ್ರೋಲ್ ಪೇಜ್ ಗೆ ಲೈಕ್ಸ್ ಹಾಗೂ ಫಾಲೋವರ್ಸ ಗಳನ್ನು ಹೆಚ್ಚಿಸಿಕೊಳ್ಳುವ ಉದ್ದೇಶವಿದ್ದಾಗ....
ಈ ಟ್ರೋಲ್ ಪೇಜ್ ಗಳ ಕಾಟಕ್ಕೆ ಸಾಮಾನ್ಯ ಜನರಂತೂ ಬಿಡಿ, ರಾಜಕೀಯ ನಾಯಕರು , ದೊಡ್ಡ ದೊಡ್ಡ ಸೆಲೆಬ್ರಿಟಿಗಳೇ ಬೇಸತ್ತು ಹೋಗಿದ್ದಾರೆ. ಕರ್ನಾಟಕದ ಮಟ್ಟಿಗೆ ಹೇಳೋದಾದರೆ ರಾಜಕೀಯ ನಾಯಕರಲ್ಲಿ ಅತಿ ಹೆಚ್ಚು ಟ್ರೋಲ್ ಗೆ ಒಳಗಾದವರು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ.
" ನಿಖಿಲ್ ಎಲ್ಲಿದ್ಡಿಯಪ್ಪಾ " ಟ್ರೋಲ್ ಕರ್ನಾಟಕ ಮಾತ್ರವಲ್ಲದೇ ವಿದೇಶದಲ್ಲೂ ಸದ್ದು ಮಾಡಿತ್ತು. ಅದು ಜನಮಾನಸದಿಂದ ಮರೆಯಾಗುವ ಮೊದಲೇ ಬಂದದ್ದು " ಮಿಣಿ ಮಿಣಿ ಪೌಡರ್ " ಟ್ರೋಲ್.ಈ ಟ್ರೋಲ್ ಗಳಿಂದ ಕುಮಾರಸ್ವಾಮಿ ಅದ್ಯಾವ ಮಟ್ಟಿಗೆ ರೋಸಿ ಹೋಗಿದ್ದರೆಂದರೆ, ಟ್ರೋಲ್ ಪೇಜ್ ಗಳ ವಿರುದ್ಧ ಹೈಕೋರ್ಟ್ ಮೆಟ್ಟಿಲು ಸಹ ಏರಿದ್ದರು. ಕುಮಾರಸ್ವಾಮಿಯವರು ಹೆಚ್ಚು ಟ್ರೋಲ್ ಆಗಲು ಕಾರಣ ಅವರು ಟೀಕೆಗಳಿಗೆ ಪ್ರತಿಕ್ರಿಯಿಸುವ ರೀತಿಯಿಂದಲೇ.ರಾಜಕೀಯವಾಗಿ ಅತ್ಯುನ್ನತ ಸ್ಥಾನಗಳನ್ನು ಅಲಂಕರಿಸಿರುವ ಕುಮಾರಸ್ವಾಮಿ ಅವರು ಸಾಮಾಜಿಕ ಜಾಲತಾಣದ ಟ್ರೋಲ್ ಗಳನ್ನು ನಿರ್ಲಕ್ಷಿಸಿ ಬಿಡಬಹುದಾಗಿತ್ತು. ಆದರೆ ಪ್ರತಿ ಟ್ರೋಲ್ ಗೂ ಪ್ರತಿಕ್ರಿಯಿಸುತ್ತಾ ಹೋಗಿ ಇನ್ನಷ್ಟು ಟ್ರೋಲ್ ಗೆ ಒಳಗಾದರು. ಆದರೆ ಈ ವಿಚಾರದಲ್ಲಿ ಸಿದ್ದರಾಮಯ್ಯ ನವರನ್ನು ಮೆಚ್ಚಲೇ ಬೇಕು. ಅವರೆಂದೂ ಟ್ರೋಲ್ ಗೆ ತಲೆ ಕೆಡಿಸಿಕೊಂಡವರೇ ಅಲ್ಲಾ. ಅದರಲ್ಲೂ ಉಪಚುನಾವಣೆ ಸಂಧರ್ಭದಲ್ಲಿ ಹುಟ್ಟಿಕೊಂಡಿದ್ದ "ಹೌದು ಹುಲಿಯಾ" ಟ್ರೋಲನ್ನು ತನ್ನ ಪರವಾಗಿ ಬದಲಾಯಿಸಿಕೊಂಡಿದ್ದು ನಿಜಕ್ಕೂ ಅದ್ಭುತ. ಆದರೂ ಇಂದಿಗೂ ಟ್ರೋಲ್ ಗಳೊಂದಿಗೆ ಯಾವ ರೀತಿ ವ್ಯವಹರಿಸಬೇಕೆಂಬುದು ಬಹುತೇಕರಿಗೆ ತಿಳಿಯುತ್ತಿಲ್ಲ..
ಅದೇನೇ ಇರಲಿ, ಅಭಿವ್ಯಕ್ತಿ ಸ್ವಾತಂತ್ರ್ಯ ಎಂಬ ಕಾನೂನಿನ ರಕ್ಷಾಕವಚ ಹೊದ್ಡಿಕೊಂಡು ಇನ್ನೊಬ್ಬರ ಮಾನಹಾನಿಗೆ ಕಾರಣವಾಗುವ ಟ್ರೋಲ್ ಪೇಜ್ ಗಳನ್ನು ನಿಯಂತ್ರಿಸಬೇಕಿದೆ. ಟ್ರೋಲಿಂಗ್ ಎಂಬ ಹುಚ್ಚು ಕುದುರೆಗೆ ಕಾನೂನಿನ ಕಡಿವಾಣ ಹಾಕಲು ಇದು ಸಂಕ್ರಮಣ ಕಾಲ...