ಯಡಿಯೂರಪ್ಪ ಮನವಿ .....!!
ಬೆಂಗಳೂರು, ಡಿಸೆಂಬರ್ 20: ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ಪ್ರತಿಭಟನೆಗಳು ನಡೆಯುತ್ತಿವೆ. ಮಂಗಳೂರಿನಲ್ಲಿ ಪೊಲೀಸರು ನಡೆಸಿದ ಗೋಲಿಬಾರ್‌ನಲ್ಲಿ ಇಬ್ಬರು ಮೃತಪಟ್ಟಿದ್ದಾರೆ.
ಕರ್ನಾಟಕದ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಶಾಂತಿ ಕಾಪಾಡುವಂತೆ ಜನರಲ್ಲಿ ಮನವಿ ಮಾಡಿದ್ದಾರೆ. ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಸೆಕ್ಷನ್ 144 ಅನ್ವಯ ನಿಷೇಧಾಜ್ಞೆ ಜಾರಿಯಲ್ಲಿದೆ. ಮಂಗಳೂರು ನಗರದ ವ್ಯಾಪ್ತಿಯಲ್ಲಿ ಕರ್ಫ್ಯೂ ಜಾರಿಗೊಳಿಸಲಾಗಿದೆ.
ಪೌರತ್ವ ತಿದ್ದುಪಡಿ ಕಾಯ್ದೆ 2019 ದೇಶದ ಯಾವುದೇ ಧರ್ಮಕ್ಕೆ ಸೇರಿದ ಭಾರತೀಯ ಪ್ರಜೆಯ ಹಕ್ಕು ಮತ್ತು ಸವಲತ್ತುಗಳಿಗೆ ಯಾವುದೇ ರೀತಿಯಲ್ಲಿ ಧಕ್ಕೆ ಉಂಟು ಮಾಡುವುದಿಲ್ಲ ಎಂದು ಪ್ರಕಟಣೆಯಲ್ಲಿ ಸ್ಪಷ್ಟಪಡಿಸಿದ್ದಾರೆ.
.ವದಂತಿಗಳಿಗೆ ಕಿವಿಗೊಡಬೇಡಿ
ಈ ಕಾಯ್ದೆ ಜಾರಿ ವಿರುದ್ಧ ರಾಜ್ಯದ ಕೆಲವು ಭಾಗಗಳಲ್ಲಿ ನಡೆಸುತ್ತಿರುವ ಪ್ರತಿಭಟನೆಗೆ ಸಂಬಂಧಿಸಿದಂತೆ ನಾಗರಿಕರು ಯಾವುದೇ ಕಾರಣಕ್ಕೂ ದುರುದ್ದೇಶಪೂರಿತ ವದಂತಿಗಳಿಗೆ ಕಿವಿಗೊಡದೆ ಶಾಂತಿ ಮತ್ತು ಸುವ್ಯವಸ್ಥೆಯನ್ನು ಕಾಪಾಡುವಂತೆ ವಿನಂತಿಸುತ್ತೇನೆ ಎಂದು ಯಡಿಯೂರಪ್ಪ ಹೇಳಿದ್ದಾರೆ.