ಬೀದರ್ ಜಿಲ್ಲೆಯಾದ್ಯಂತ ಎಳ್ಳು ಅಮಾವಾಸ್ಯೆ ಹಬ್ಬದ ಸಡಗರ.....
ಬಿದರ : ಇಂದು ಜಿಲ್ಲೆಯ ವಿವಿಧೆಡೆ ಎಳ್ಳು ಅಮಾವಾಸ್ಯೆಯ ಪ್ರಯುಕ್ತ ರೈತರು ಕುಟುಂಬದ ಸದಸ್ಯರೊಂದಿಗೆ ತಮ್ಮ ಹೊಲಗಳಿಗೆ ತೆರಳಿ ಪಾಂಡವರ ಪ್ರತಿಮೆ ಹಾಗೂ ಭೂದೇವಿಗೆ ವಿಶೇಷ ಪೂಜೆ ಸಲ್ಲಿಸಿದರು.
ಇಂದು ರೈತರ ಆರಾಧ್ಯದೇವತೆ ಭೂಮಿ ತಾಯಿಗೆ ನಮಿಸುವ ದಿನ. ಹಚ್ಚಹಸಿರಿನ ಸೀರೆಯನ್ನು ಉಟ್ಟ ಭೂತಾಯಿಯ ಆರಾಧನೆ, ಹೊಲದಲ್ಲಿ ಸಾಮೂಹಿಕ ಪೂಜೆ ಮತ್ತು ಭೋಜನ ಸವಿದು ರೈತರು ಸಡಗರ ಸಂಭ್ರಮದಿಂದ ಭೂತಾಯಿಯ ಪ್ರಾರ್ಥಿಸುವ ಪರಂಪರೆಯ ಪ್ರತೀಕದ ಹಬ್ಬವೇ ಈ ಎಳ್ಳು ಅಮಾವಾಸ್ಯೆ. ಅದರಲ್ಲೂ ಉತ್ತರಕರ್ನಾಟಕ ಭಾಗದಲ್ಲಿ ಪ್ರತಿ ವರ್ಷವೂ ಎಲ್ಲರ ಹೊಲ ಗದ್ದೆಗಳಲ್ಲಿ ಎಳ್ಳು ಅಮಾವಾಸ್ಯೆಯ ದಿನವನ್ನು ಸಡಗರ ಸಂಭ್ರಮದಿಂದ ಆಚರಿಸುತ್ತಾರೆ.
ರೈತರು ಹೊಲದಲ್ಲಿ ಜೋಳದ ಕನಿಕೆಯಿಂದ ಕೊಂಪೆ ಕಟ್ಟಿ ಅದಕ್ಕೆ ಹೊಸ ಸೀರೆಯನ್ನು ಸುತ್ತಿ ಕೊಂಪೆಯೊಳಗೆ ಪಾಂಡವರ ಪ್ರತಿಮೆಗಳ ರೂಪದಲ್ಲಿ ಐದು ಕಲ್ಲುಗಳನ್ನು ಇಟ್ಟು ಅರಿಷಿಣ ಕುಂಕುಮ ಹಾಗೂ ವಿಭೂತಿ ಬಳಿದು ಆರತಿ ಬೆಳಗಿದರು.
ಮನೆಯಿಂದ ತಂದಿದ್ದ ಜೋಳದ ರೊಟ್ಟಿ, ಸಜ್ಜೆ ರೊಟ್ಟಿ, ರುಚಿಕಟ್ಟಾದ ಭಜ್ಜಿಪಲ್ಯೆ, ಶೇಂಗಾ-ಎಳ್ಳಿನ ಹೋಳಿಗೆ, ಜೋಳದ ಅನ್ನ, ನವಣೆ ಅನ್ನ ಹಾಗೂ ಕಡುಬು ದೇವರ ಮುಂದೆ ಇಟ್ಟು ನೈವೇದ್ಯ ಮಾಡಿ ಭಕ್ತಿಭಾವದಿಂದ ಸಮರ್ಪಿಸಿದರು.
ಹೊಲದ ಅಂಚಿನಲ್ಲಿದ್ದ ಬೇವು ಹಾಗೂ ಮಾವಿನ ಮರಗಳ ಕೆಳಗೆ ಕುಳಿತು ಕುಟುಂಬದ ಸದಸ್ಯರೊಂದಿಗೆ ಭೋಜನ ಮಾಡಿದರು.