ಪ್ರೇಯಸಿಯ ಕತ್ತು ಸೀಳಿ ಬರ್ಬರ ಹತ್ಯೆ; ಪ್ರಿಯಕರನ ರೂಮಿಗೆ ಹೋದ ಯುವತಿಯ ದುರಂತ ಅಂತ್ಯ
ವಾರಂಗಲ್ :- ಪ್ರೀತಿಗಾಗಿ ಪ್ರಾಣ ಕೊಡಲೂ ಸಿದ್ಧ ಎನ್ನುವ ಅನೇಕ ಪ್ರೇಮಿಗಳಿದ್ದಾರೆ. ಪ್ರೀತಿಯನ್ನು ಉಳಿಸಿಕೊಳ್ಳಲು ಸಾಧ್ಯವಾಗಲಿಲ್ಲ ಎಂಬ ಕಾರಣಕ್ಕೆ ಜೀವವನ್ನೇ ಕಳೆದುಕೊಂಡವರೂ ಇದ್ದಾರೆ. ಆದರೆ, ತೆಲಂಗಾಣದ ವಾರಂಗಲ್ನ ಪ್ರೇಮಿಯೊಬ್ಬ ತನ್ನ ಪ್ರೇಯಸಿಯನ್ನು ರೂಮಿಗೆ ಕರೆದು, ಆಕೆಯ ಕತ್ತು ಸೀಳಿ ಬರ್ಬರವಾಗಿ ಹತ್ಯೆ ಮಾಡಿದ್ದಾನೆ.
ತನ್ನ ಪ್ರೇಯಸಿಯ ಕುತ್ತಿಗೆ ಸೀಳಿ ಕೊಲೆ ಮಾಡಿರುವ ಮೊಹಮ್ಮದ್ ಶಾಹಿದ್ ಪೊಲೀಸರಿಗೆ ಶರಣಾಗಿದ್ದಾನೆ. ಲಷ್ಕರ್ ಸಿಂಗರಂ ಗ್ರಾಮದಲ್ಲಿ ವಾಸವಾಗಿದ್ದ ಮುನಿಗಲ ಹಾರತಿ ಎಂಬ ಯುವತಿಯನ್ನು ಪ್ರೀತಿಸುತ್ತಿದ್ದ ಶಾಹಿದ್ ಆಕೆಯನ್ನು ಮದುವೆಯಾಗಲು ನಿರ್ಧರಿಸಿದ್ದ. ಆದರೆ, ಆಕೆ ಬೇರೊಬ್ಬರೊಂದಿಗೆ ಅಕ್ರಮ ಸಂಬಂಧ ಹೊಂದಿರುವ ಬಗ್ಗೆ ಇತ್ತೀಚೆಗೆ ಆತನಿಗೆ ಅನುಮಾನ ಶುರುವಾಗಿತ್ತು. ಆ ಅನುಮಾನದಿಂದಲೇ ಪ್ರಿಯತಮೆಯನ್ನು ಭೀಕರವಾಗಿ ಹತ್ಯೆ ಮಾಡಿರುವುದಾಗಿ ಆತ ಹೇಳಿಕೆ ನೀಡಿದ್ದಾನೆ.
25 ವರ್ಷದ ಮುನಿಗಲ ಹಾರತಿ ಎಂಬಿಎ ಪದವಿ ಪಡೆದಿದ್ದಳು. ಅಕ್ಕಪಕ್ಕದ ಊರಿನವರಾಗಿದ್ದ ಮೊಹಮ್ಮದ್ ಶಾಹಿದ್ ಮತ್ತು ಹಾರತಿ ಕಾಲೇಜಿನಲ್ಲಿ ಒಟ್ಟಿಗೆ ಓದುತ್ತಿದ್ದಾಗಲೇ ಇಬ್ಬರ ನಡುವೆ ಪ್ರೀತಿ ಮೊಳೆತಿತ್ತು. ಶಾಹಿದ್ ಬಗ್ಗೆ ಹಾರತಿ ಮನೆಯಲ್ಲಿ ಎಲ್ಲರಿಗೂ ತಿಳಿದಿತ್ತು. ಆತ ಆಕೆಯ ಮನೆಗೆ ಬಂದು ಹೋಗಿ ಮಾಡುತ್ತಿದ್ದ. ಇತ್ತೀಚೆಗೆ ಶಾಹಿದ್ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ಮಾಡಿಕೊಳ್ಳುವ ಸಲುವಾಗಿ ರಾಮನಗರ ಕಾಲೋನಿಯಲ್ಲಿ ಬಾಡಿಗೆ ಮನೆ ಮಾಡಿಕೊಂಡಿದ್ದ. ಇತ್ತೀಚೆಗೆ ಹಾರತಿ ಬೇರೊಬ್ಬನೊಂದಿಗೆ ಅಕ್ರಮ ಸಂಬಂಧ ಹೊಂದಿದ್ದಾಳೆ ಎಂಬ ವಿಷಯ ಶಾಹಿದ್ ಕಿವಿಗೆ ಬಿದ್ದಿತ್ತು., ಈ ಬಗ್ಗೆ ಮಾತನಾಡಲು ಆಕೆಯನ್ನು ತನ್ನ ರೂಮಿಗೆ ಬರಲು ಹೇಳಿದ್ದ. ಈ ವೇಳೆ ಇಬ್ಬರ ನಡುವೆ ಮಾತಿಗೆ ಮಾತು ಬೆಳೆದು ಶಾಹಿದ್ ಹಾರತಿಯ ಕತ್ತು ಸೀಳಿದ್ದಾನೆ ಎಂದು ಇಂಡಿಯನ್ ಎಕ್ಸ್ಪ್ರೆಸ್ ವರದಿ ಮಾಡಿದೆ.
ಹಾರತಿಯ ಗಂಟಲನ್ನು ಚಾಕುವಿನಿಂದ ಕೊಯ್ದಿದ್ದರಿಂದ ತೀವ್ರ ರಕ್ತಸ್ರಾವವಾಗಿ ಆಕೆ ಸ್ಥಳದಲ್ಲೇ ಸಾವನ್ನಪ್ಪಿದ್ದಾಳೆ. ನಂತರ ವಾರಂಗಲ್ ಕೇಂದ್ರ ಕಾರಾಗ್ರಹಕ್ಕೆ ತೆರಳಿದ ಶಾಹಿದ್ ತಾನು ಕೊಲೆ ಮಾಡಿರುವುದಾಗಿ ತಪ್ಪೊಪ್ಪಿಕೊಂಡಿದ್ದಾನೆ. ಆತನನ್ನು ಅಲ್ಲಿನ ಸಿಬ್ಬಂದಿ ಸುಬೇದಾರಿ ಪೊಲೀಸ್ ಠಾಣೆಗೆ ಕರೆದೊಯ್ದಿದ್ದಾರೆ. ಸ್ಥಳಕ್ಕೆ ತೆರಳಿ ಪರಿಶೀಲಿಸಿದ ಪೊಲೀಸರು ಶಾಹಿದ್ ವಿರುದ್ಧ ಕೇಸು ದಾಖಲಿಸಿಕೊಂಡಿದ್ದಾರೆ.