ಬೇಸಿಗೆಯ ಬಿಸಿ ತಣಿಸಲು ನಗರಕ್ಕೆ ಕಾಲಿಟ್ಟಿವೆ ಕಲ್ಲಂಗಡಿ ಹಣ್ಣು....
ನಗರಕ್ಕೆ ಬೇಸಿಗೆಯ ಬಿಸಿ ಇಷ್ಟಿಷ್ಟೇ ಕಾಲಿಡುವ ಹೊತ್ತಿಗೆ ಕಲ್ಲಂಗಡಿ ಹಣ್ಣು ಸಹ ಕಾಲಿಟ್ಟಿದೆ. ನೀರುಹಣ್ಣು ಎಂದೇ ಖ್ಯಾತವಾಗಿರುವ ಕಲ್ಲಂಗಡಿ ಹಣ್ಣು ಬೇಸಿಗೆಯಲ್ಲಿ ಬಾಯಾರಿಕೆ ತಣಿಸುವ, ಶಕ್ತಿ ವರ್ಧಕ ಹಣ್ಣು.ನಗರದೆಲ್ಲೆಡೆ ಕಲ್ಲಂಗಡಿ ರಾಶಿ ನೋಡುವ ಜನ ಅಲ್ಲಿ ವಾಹನ ನಿಲ್ಲಿಸಿ ಹಣ್ಣು ಸೇವನೆ ಮಾಡಿ, ಖರೀದಿಸದೇ ಮುಂದೆ ಹೋಗುವುದಿಲ್ಲ.
ನಗರ ವ್ಯಾಪ್ತಿಯಲ್ಲಿ, ರಸ್ತೆಗೆ ಹೊಂದಿಕೊಂಡ ಖಾಲಿ ಜಾಗಗಳಲ್ಲಿ ಹಣ್ಣಿನ ರಾಶಿ ಹಾಕಿಕೊಳ್ಳುವ ವ್ಯಾಪಾರಿಗಳು, ತಿಂಗಳುಗಟ್ಟಲೇ ಇಲ್ಲೇ ಬಿಡಾರ ಹೂಡಿ, ವ್ಯಾಪಾರಕ್ಕೆ ಮುಂದಾಗಿದ್ದಾರೆ. ಬಿಸಿಲಿನ ಶಾಖದಿಂದ ಪಾರಾಗಲು ಜನರು ಕಲ್ಲಂಗಡಿ ಹಣ್ಣುಗಳತ್ತ ಮುಖ ಮಾಡಿದ್ದಾರೆ.ಒಂದೊಂದು ಹಣ್ಣು ಕನಿಷ್ಠ 4 ಕೆ.ಜಿ. ತೂಗುವುದರಿಂದ ಹಣ್ಣನ್ನು ಇಡೀಯಾಗಿ ಖರೀದಿಸಬೇಕೆನ್ನುವವರು ಕನಿಷ್ಠ 100 ರೂ ಖರ್ಚು ಮಾಡಲೇಬೇಕು. ಇನ್ನೂ ಹೆಚ್ಚು ತೂಕದ ಹಣ್ಣು ಬೇಕೆಂದವರಿಗೆ ಅಲ್ಲಿ ಬೃಹತ್ ಗಾತ್ರದ ಹಣ್ಣುಗಳು ಕಾಯುತ್ತಿವೆ.
ಕಲ್ಲಂಗಡಿ ಹಣ್ಣಿಗೆ ಕೊಂಚವೇ ಕಾಳು ಮೆಣಸಿನ ಪುಡಿಯನ್ನು ಉದುರಿಸಿ ತಿಂದರೆ ಇದರ ರುಚಿ ಇನ್ನಷ್ಟು ಹೆಚ್ಚಾಗುತ್ತದೆ .ಹಾಗೂ ತೂಕ ಇಳಿಸುವ ವೇಗದಲ್ಲಿ ತೀವ್ರತೆಯನ್ನು ಪಡೆಯಬಹುದು .ಇದು ಹೇಗೆಂದರೆ ಕಾಳುಮೆಣಸಿನ ಪುಡಿ ಜೀರ್ಣರಸಗಳನ್ನು ಇನ್ನಷ್ಟು ಪ್ರಚೋದಿಸಿ ಹೆಚ್ಚಿನ ಕೊಬ್ಬನ್ನು ಬಳಸಿಕೊಳ್ಳುವಂತೆ ಮಾಡುತ್ತದೆ .ವಿಶೇಷವಾಗಿ ಸಂಜೆ ಮತ್ತು ರಾತ್ರಿ ಊಟದ ಬಳಿಕ ಸೇವಿಸುವ ಕಲ್ಲಂಗಡಿ ಹಾಗೂ ಕಾಳುಮೆಣಸಿನ ಪುಡಿಯ ಜೋಡಿ ಹೆಚ್ಚಿನ ತೂಕವನ್ನು ಇಳಿಸುವಲ್ಲಿ ಸಹಾಯಕವಾಗಿದೆ .
ಬೇಸಿಗೆಯಲ್ಲಿ ಅತಿಯಾದ ಸೆಕೆಯಿಂದ ಹಸಿವು ಕೂಡ ಸರಿಯಾಗಿ ಆಗುವುದಿಲ್ಲ .ಕಲ್ಲಂಗಡಿ ಹಣ್ಣಿನಲ್ಲಿ ಹೆಚ್ಚಿನ ನೀರು ಹಾಗೂ ನಾರಿನಾಂಶ ಇರುವ ಕಾರಣದಿಂದ ಜೀರ್ಣ ಕ್ರಿಯೆಯೂ ಸರಾಗವಾಗಿ ಆಗುವುದು .ಇದು ಕಲ್ಲಂಗಡಿಯ ಮತ್ತೊಂದು ಆರೋಗ್ಯ ಲಾಭವಾಗಿದೆ .ಹಾಗೂ ಕಲ್ಲಂಗಡಿಯೂ ರಕ್ತದೊತ್ತಡವನ್ನು ನಿವಾರಿಸುವಲ್ಲಿ ತುಂಬಾ ಪ್ರಮುಖ ಪಾತ್ರ ವಹಿಸುತ್ತದೆ .ರಕ್ತನಾಳಗಳನ್ನು ಸರಿಯಾಗಿಟ್ಟು ಕೊಂಡು ರಕ್ತ ಚಲನೆಯು ಸರಿಯಾಗಿ ಆಗುವಂತೆ ಸಹ ಮಾಡುತ್ತದೆ.