ದಾಖಲೆಯ ಚಳಿಗೆ ತತ್ತರಿಸಿದ ಉತ್ತರ ಭಾರತ....ದೆಹಲಿಯಲ್ಲಿ ರೆಡ್ ಅಲರ್ಟ್ ಘೋಷಣೆ.
ದೆಹಲಿ : ದಾಖಲೆಯ ತಾಪಮಾನ ಕುಸಿತದಿಂದಾಗಿ ದೆಹಲಿ ಸೇರಿದಂತೆ ಸಂಪೂರ್ಣ ಉತ್ತರಭಾರತ ತತ್ತರಿಸಿಹೋಗಿದೆ. ದೆಹಲಿಯಲ್ಲಿ ಬೆಳಗ್ಗೆ ಸರಾಸರಿ 2.4 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿತ್ತು. ಲೋದಿ ರಸ್ತೆಯಲ್ಲಿ ಅತ್ಯಂತ ಕಡಿಮೆ ಅಂದರೆ 1.7 ಡಿಗ್ರಿ ಸೆಲ್ಸಿಯಸ್ ಕನಿಷ್ಟ ತಾಪಮಾನ ಇತ್ತು. ಆಯಾನಗರ್‍ನಲ್ಲಿ 1.9 ಮತ್ತು ಸಪ್ತರ್‍ಜಂಗ್‍ನಲ್ಲಿ 2.4ರಷ್ಟು ಅತ್ಯಧಿಕ ಕಡಿಮೆ ಉಷ್ಣಾಂಶ ದಾಖಲಾಗಿತ್ತು.
ದಟ್ಟ ಮಂಜಿನಿಂದಾಗಿ ರಸ್ತೆಗಳಲ್ಲಿ ಕತ್ತಲು ಆವರಿಸಿದ್ದು, ವಾಹನ ಸಂಚಾರಕ್ಕೆ ತೀವ್ರ ಅಡಚಣೆಯುಂಟಾಗಿದೆ. ಇನ್ನು ದಟ್ಟ ಮಂಜಿನಿಂದಾಗಿ ದೆಹಲಿಯಲ್ಲಿ ವಿಮಾನಗಳ ಹಾರಾಟ ಮತ್ತು ರೈಲು ಸಂಚಾರವನ್ನು ರದ್ದು ಮಾಡಲಾಗಿದೆ. ದಟ್ಟ ಮಂಜು ಮತ್ತು ಕಲುಷಿತ ಹೊಗೆ ಸೇರಿ ದೆಹಲಿಯ ಹವಾಮಾನ ಪರಿಸ್ಥಿತಿ ತೀವ್ರವಾಗಿ ಹದಗೆಟ್ಟಿದೆ.
ಕೇವಲ ದೆಹಲಿಯಷ್ಟೇ ಅಲ್ಲದೆ, ಉತ್ತರ ಭಾರತದ ಹಲವೆಡೆ ತೀವ್ರ ಚಳಿಗೆ ಜನರು ತತ್ತರಿಸಿ ಹೋಗಿದ್ದಾರೆ. ಉತ್ತರ ಪ್ರದೇಶ, ಪಂಜಾಬ್, ಹರಿಯಾಣ ಸೇರಿದಂತೆ ಹಲವು ಭಾಗಗಳಲ್ಲಿ ಭಾರೀ ಚಳಿ ಇರುವುದಾಗಿ ವರದಿಗಳು ತಿಳಿಸಿವೆ. ಇನ್ನು ಕಾಶ್ಮೀರದಲ್ಲಂತೂ ಚಳಿ ಮಿತಿ ಮೀರಿದ್ದು, ದಾಲ್ ಸರೋವರ ಕಲ್ಲಾಗಿದೆ. ಶ್ರೀನಗರ ಹಾಗೂ ಕೆಲವು ಭಾಗಗಳಲ್ಲಿ ತೀವ್ರ ಮಂಜು ಆವರಿಸಿವೆ.
ಈಶಾನ್ಯ ಭಾರತದ ಅಸ್ಸೋಂ, ತ್ರಿಪುರಾ, ನಾಗಾಲ್ಯಾಂಡ್, ಮಣಿಪುರ, ಮೇಘಾಲಯ, ಸಿಕ್ಕಿಂ ರಾಜ್ಯಗಳಲ್ಲೂ ತಾಪಮಾನದಲ್ಲಿ ತೀವ್ರ ಇಳಿಕೆ ಕಂಡುಬಂದಿದ್ದು, ಭಾರೀ ಚಳಿಯಿಂದ ಜನರು ನಡುಗುವಂತಾಗಿದೆ.
ಇನ್ನು ತಾಪಮಾನ ತೀವ್ರ ಇಳಿಮುಖ ಸ್ಥಿತಿಯಲ್ಲಿಯೇ ಮುಂದುವರಿದಿದ್ದು, ಭಾರತೀಯ ಹವಾಮಾನ ಇಲಾಖೆ(ಐಎಂಡಿ) ದೆಹಲಿಯಲ್ಲಿ ರೆಡ್ ಅಲರ್ಟ್ ಎಚ್ಚರಿಕೆ ಜಾರಿಗೊಳಿಸಿದೆ.