ಸರ್ವಶರಣರ ಸಮ್ಮೇಳನಕ್ಕೆ ಮುಖ್ಯಮಂತ್ರಿಗಳನ್ನ ಆಹ್ವಾನಿಸಿದ ಮುರುಘಾ ಶರಣರು....
ಚಿತ್ರದುರ್ಗ: 2020 ನೇ ಫೆಬ್ರುವರಿ 16ರಂದು ಬೆಂಗಳೂರು ಅಂತಾರಾಷ್ಟ್ರೀಯ ವಸ್ತು ಪ್ರದರ್ಶನ ಕೇಂದ್ರ (ಬಿ.ಬಿ.ಇ.ಸಿ.)ದಲ್ಲಿ ಶಿವಯೋಗ ಸಂಭ್ರಮ, ಅಸಂಖ್ಯ ಪ್ರಮಥ ಗಣಮೇಳ ಮತ್ತು ಸರ್ವಶರಣ ಸಮ್ಮೇಳನ ನಡೆಯಲಿದ್ದು, ಶ್ರೀ ಮುರುಘರಾಜೇಂದ್ರ ಮಠದ ಡಾ. ಶಿವಮೂರ್ತಿ ಮುರುಘಾ ಶರಣರು ನಿನ್ನೆ ಬೆಂಗಳೂರಿನಲ್ಲಿ ಸಿಎಂ ಬಿಎಸ್ವೈ ಅವರನ್ನು ಭೇಟಿಯಾಗಿ, ಈ ಸಮ್ಮೇಳನದಲ್ಲಿ ಭಾಗವಹಿಸುವಂತೆ ಅವರನ್ನು ಆಹ್ವಾನಿಸಿದರು.
ಬಿಎಸ್ವೈ ಅವರನ್ನು ಭೇಟಿ ಮಾಡಿದ ಶ್ರೀ ಮುರುಘಾ ಶರಣರು, ಚಿತ್ರದುರ್ಗ ಜಿಲ್ಲೆಯಲ್ಲಿ ಕಾಲಕಾಲಕ್ಕೆ ಮಳೆಯಾಗದೆ ಬರದ ವಾತಾವರಣದಿಂದಾಗಿ ಅಲ್ಲಿನ ಜನ-ಜಾನುವಾರುಗಳು ಕುಡಿಯುವ ನೀರಿಗೂ ತೊಂದರೆ ಅನುಭವಿಸುತ್ತಿದ್ದಾರೆ. ಮಳೆಯನ್ನೇ ಅವಲಂಬಿಸಿರುವ ಸಣ್ಣ ಹಿಡುವಳಿದಾರರು, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಜನರು, ರೈತಾಪಿ ಕುಟುಂಬಗಳೂ ಸಹ ನೀರಿನ ಸಮಸ್ಯೆ ಎದುರಿಸುತ್ತಿದ್ದಾರೆ. ಆದ್ದರಿಂದ ಭದ್ರಾ ಮೇಲ್ದಂಡೆ ಯೋಜನೆಯ ಸಮಗ್ರ ಕಾಮಗಾರಿಯನ್ನು ತುರ್ತಾಗಿ ನಿರ್ವಹಿಸಲು ಸೂಕ್ತ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದಾರೆ.
ಕೇವಲ ಕೃಷಿ ಚಟುವಟಿಕೆಗಳನ್ನು ಮಾತ್ರ ಅವಲಂಬಿಸಿರುವ ಜಿಲ್ಲೆಯ ಯುವಜನತೆ ನಿರುದ್ಯೋಗ ಸಮಸ್ಯೆಯಿಂದಾಗಿ, ಕೆಲಸಕ್ಕಾಗಿ ಪರಸ್ಥಳಗಳಿಗೆ ಗುಳೆ ಹೋಗುತ್ತಿದ್ದಾರೆ. ಅದಕ್ಕಾಗಿ ಗ್ರಾಮೀಣ ಯುವಕರಿಗೆ ಅನುಕೂಲವಾಗುವಂತೆ ಹೊಸದಾಗಿ ಗುಡಿ ಕೈಗಾರಿಕೆಗಳನ್ನು ಸ್ಥಾಪಿಸಲು ಅವಕಾಶ ಕಲ್ಪಿಸುಬೇಕು.
ಚಿತ್ರದುರ್ಗ ಜಿಲ್ಲೆಯ ಸಮಗ್ರ ಅಭಿವದ್ಧಿಯನ್ನು ಗಮನದಲ್ಲಿರಿಸಿಕೊಂಡು ಹಾಗು ಮೇಲ್ಕಂಡ ಎಲ್ಲಾ ಕಾರ್ಯಕ್ರಮಗಳನ್ನು ತ್ವರಿತವಾಗಿ ಅನುಷ್ಠಾನಗೊಳ್ಳಲು ವಿಶೇಷ ಪ್ಯಾಕೇಜ್ ಘೋಷಣೆ ಮಾಡುವಂತೆ ಇದೇ ಸಂದರ್ಭದಲ್ಲಿ ಮನವಿ ಸಲ್ಲಿಸಿದರು.
ಭೋವಿಗುರುಪೀಠದ ಶ್ರೀ ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮಿಗಳು, ಕುಂಚಿಟಿಗ ಗುರುಪೀಠದ ಶ್ರೀ ಶಾಂತವೀರ ಸ್ವಾಮಿಗಳು, ಅಥಣಿ ಗಚ್ಚಿನ ಮಠದ ಶ್ರೀ ಶಿವಬಸವ ಸ್ವಾಮಿಗಳು, ಗಾಣಿಗ ಗುರುಪೀಠದ ಶ್ರೀ ಜಯಬಸವ ಸ್ವಾಮಿಗಳು, ಮಡಿವಾಳ ಗುರುಪೀಠದ ಶ್ರೀ ಬಸವ ಮಾಚಿದೇವ ಸ್ವಾಮಿಗಳು, ಹರಳಯ್ಯ ಗುರುಪೀಠದ ಶ್ರೀ ಬಸವ ಹರಳಯ್ಯ ಸ್ವಾಮಿಗಳು, ಮರುಳಶಂಕರದೇವರ ಗುರುಪೀಠದ ಶ್ರೀ ಸಿದ್ಧಬಸವ ಕಬೀರ ಸ್ವಾಮಿಗಳು, ಶಿಕಾರಿಪುರ ವಿರಕ್ತಮಠದ ಶ್ರೀ ಚನ್ನಬಸವ ಸ್ವಾಮಿಗಳು, ಶಿರಸಿ ರುದ್ರದೇವರ ಮಠದ ಶ್ರೀ ಮಲ್ಲಿಕಾರ್ಜುನ ಸ್ವಾಮಿಗಳು, ಶಾಸಕ ರಾಜಕುಮಾರ್ ಪಾಟೀಲ್ ಸೇಡಂ, ಸುಶಿಲ್ ನಮೋಶಿ ಜೊತೆಗಿದ್ದರು.