ವಿಜಯನಗರದ ವಾಸವಿ ಕಾಲೇಜ್ ಕ್ಯಾಂಪಸ್ ನಲ್ಲಿ ಸೃಷ್ಟಿಯಾದ ಜಾನಪದ ಲೋಕ...
ಬೆಂಗಳೂರು : ಮಂಗಳವಾರ ವಾಸವಿ ಸಮೂಹ ಶಿಕ್ಷಣ ಸಂಸ್ಥೆ ವಿಜಯನಗರ ಕಾಲೇಜ್ ನ ವಿದ್ಯಾರ್ಥಿಗಳ ಸಂಭ್ರಮ ಮುಗಿಲು ಮುಟ್ಟಿತ್ತು. ಎಲ್ಲರೂ ಜಾನಪದ ಉಡುಗೆಯಲ್ಲಿ ಕಂಗೋಳಿಸುತ್ತಿದ್ದರು. ಕಾಲೇಜ್ ಕ್ಯಾಂಪಸ್ ನಲ್ಲಿ ಜಾನಪದ ಲೋಕವೇ ಸೃಷ್ಟಿಯಾಗಿತ್ತು. ಇದೆಲ್ಲಾ ಕಂಡು ಬಂದದ್ದು "ಜನಪದ ಸಿರಿ " ಥೀಮ್ ಅಡಿಯಲ್ಲಿ ನಡೆದ ಕಾಲೇಜ್ ಫೆಸ್ಟ್ ನಲ್ಲಿ.
ಹೌದು, ಇತ್ತೀಚಿನ ದಿನಗಳಲ್ಲಿ ಮರೆಯಾಗುತ್ತಿರುವ ಜಾನಪದ ಕಲೆಯನ್ನು ಉಳಿಸುವ ಸಲುವಾಗಿ ಹಾಗೂ ಆ ಕಲೆಯಿಂದ ಹೆಚ್ಚು ಅಪರಿಚಿತರಾಗಿ ಉಳಿದಿರುವ ನಗರದ ಯುವ ಪೀಳಿಗೆಗೆ ಅದನ್ನು ಪರಿಚಯಿಸುವ ದ್ರಷ್ಠಿಯಿಂದ ವಾಸವಿ ಕಾಲೇಜ್ ನಲ್ಲಿ ಈ ಬಾರಿಯ ಕಾಲೇಜ್ ಫೆಸ್ಟ್ ನಲ್ಲಿ ಜಾನಪದ ಸಂಸ್ಕ್ರತಿಯನ್ನು ಬಿಂಬಿಸಲಾಯಿತು.
ವಿದ್ಯಾರ್ಥಿಗ ಜಾನಪದ ಉಡುಗೆ ತೊಟ್ಟು, ಕರ್ನಾಟಕದ ವಿವಿಧ ನೃತ್ಯ ಪ್ರಕಾರಗಳಾದ ಕೊಡವರ ಕುಣಿತ, ಹುಲಿ ವೇಷ , ಬೆಂಗಳೂರು ಕರಗ, ಕಾಡು ಜನರ ಕುಣಿತ , ಉತ್ತರ ಕರ್ನಾಟಕದ ಲಾವಣಿ , ವೀರಗಾಸೆ, ಕಂಸಾಳೆ ಹೀಗೆ ಹಲವು ಬಗೆಯ ಜಾನಪದ ನೃತ್ಯಗಳಿಗೆ ಹೆಜ್ಜೆ ಹಾಕುವ ಮೂಲಕ ಖುಷಿ ಪಟ್ಟರು. ಜೊತೆಗೆ ವಿದ್ಯಾರ್ಥಿಗಳು ಹಾಕಿದ್ದ ತಿಂಡಿಯ ಸ್ಟಾಲ್ ಗಳು ಎಲ್ಲರ ಗಮನ ಸೆಳೆದವು. ವಿಶೇಷ ಎಂದರೆ ಕರ್ನಾಟಕದ ಎಲ್ಲಾ ಭಾಗಗಳ ತಿಂಡಿಗಳ ಸ್ಟಾಲ್ ಗಳು ಇಲ್ಲಿದ್ದವು.
ಇನ್ನು ಫೆಸ್ಟ್ ಬಗ್ಗೆ ಅಲ್ಮಾ ನ್ಯೂಸ್ ನೊಂದಿಗೆ ಮಾತನಾಡಿದ ಸಂಸ್ಥೆಯ ಕಾರ್ಯದರ್ಶಿ ವಿಜಯಸಾರಥಿ ಇಂದಿನ ಪೀಳಿಗೆ ಜಾನಪದ ಸಂಸ್ಕ್ರತಿಯಿಂದ ವಿಮುಖವಾಗುತಿದ್ದು , ಅವರಿಗೆ ನಮ್ಮ ಸಂಸ್ಕ್ರತಿಯನ್ನು ಪರಿಚಯಿಸುವ ಜವಬ್ದಾರಿ ನಮ್ಮ ಮೇಲಿದೆ.ಆದ್ದರಿಂದ ಈ ಬಾರಿಯ ಫೆಸ್ಟ್ ಗೆ ಜಾನಪದ ಸಿರಿಯ ಥೀಮ್ ಆಯ್ಕೆ ಮಾಡಿಕೊಳ್ಳಲಾಗಿದೆ ಎಂದರು. ಇನ್ನು ವಿದ್ಯಾರ್ಥಿಗಳಲ್ಲಿ ವ್ಯಾವಹಾರಿಕ ದೃಷ್ಠಿಕೋನ ಬೆಳೆಸುವ ಸಲುವಾಗಿ ಅವರಿಗೆ ಸ್ಟಾಲ್ ಗಳನ್ನು ಹಾಕಲು ಹೇಳಿದೆವು. ಆ ಮೂಲಕ ಅವರಲ್ಲಿ
ಉದ್ಯಮಶೀಲತೆಯನ್ನು ಬೆಳೆಸುವ ಪ್ರಯತ್ನ ಸಂಸ್ಥೆ ಮಾಡುತ್ತಿದ್ದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಸಂಸ್ಥೆಯ ಅಧ್ಯಕ್ಷರಾದ ಡಾ.ರಂಗಧಾಮ ಶೆಟ್ಟಿ , ಪ್ರಾಂಶುಪಾಲರಾದ ವಿ.ಪದ್ಮಾ , ಉಪ ಪ್ರಾಂಶುಪಾಲರು ಹಾಗೂ ಕಾರ್ಯಕ್ರಮದ ಸಂಚಾಲಕರಾದ ಎಂ. ಪುಷ್ಪಾ ಸೇರಿದಂತೆ ಕಾಲೇಜ್ ನ ಉಪನ್ಯಾಸಕರು ಮತ್ತು ವಿದ್ಯಾರ್ಥಿಗಳ ಪೋಷಕರು ಉಪಸ್ಥಿತರಿದ್ದರು.