ಕೇಂದ್ರ ಸರ್ಕಾರದಿಂದ ಬಜೆಟ್ ಮಂಡನೆಗೆ ಭರ್ಜರಿ ಸಿದ್ಧತೆ....
ನವ ದೆಹಲಿ : ಕೇಂದ್ರ ಸರ್ಕಾರದ ಈ ಬಾರಿಯ ಬಜೆಟ್ ಸಾಕಷ್ಟು ನಿರೀಕ್ಷೆ ಹುಟ್ಟು ಹಾಕಿದೆ. ಆರ್ಥಿಕ ಕುಸಿತ, ಜಿಡಿಪಿ ನಷ್ಟ , ದಿನೇ ದಿನೇ ಹೆಚ್ಚಾಗುತ್ತಿರುವ ಹಣದುಬ್ಬರ, ಹಾಗೂ ಕಾಡುತ್ತಿರುವ ನಿರುದ್ಯೋಗ ಈ ಎಲ್ಲಾ ಸಮಸ್ಯೆಗಳಿಗೆ ಬಜೆಟ್ ನಲ್ಲಿ ಪರಿಹಾರ ಹುಡುಕಬೇಕಾದ ಒತ್ತಡ ಕೇಂದ್ರ ಸರ್ಕಾರದ ಮೇಲಿದೆ.
ಇನ್ನು ಈ ಬಾರಿಯ ಬಜೆಟ್ ಸಿಧ್ಧತೆಗಳನ್ನು ಖುದ್ದು ನರೇಂದ್ರ ಮೋದಿಯವರೇ ಪರಿಶೀಲಿಸುತ್ತಿದ್ದಾರೆ. ಪ್ರಧಾನಿ ಮೋದಿ, ಹಣಕಾಸು ಸಚಿವೆ ನಿರ್ಮಲಾ ಸಿತಾರಾಮನ್ , ಉದ್ಯಮಿಗಳು, ಆರ್ಥಿಕ ತಜ್ಞರು ಹಾಗೂ ರೈತ ಸಂಘಗಳು ಈಗಾಗಲೇ ಹಲವು ಸುತ್ತಿನ ಸಭೆ ನಡೆಸಿ ಬಜೆಟ್ ರೂಪುರೇಷೆಗಳನ್ನು ಸಿದ್ಧಪಡಿಸಿದ್ದಾರೆ.
ಆರ್ಥಿಕ ಹಿಂಜರಿತದ ಕಾರಣದಿಂದಾಗಿ ನೇರ ತೆರಿಗೆ ಸಂಗ್ರಹ ಕಡಿಮೆಯಾಗಿದ್ದು, ಅದನ್ನು ಹೆಚ್ಚಿಸುವ ಸಲುವಾಗಿ ಹಲವು ಪೂರಕ ಯೋಜನೆಗಳನ್ನು ಬಜೆಟ್ ನಲ್ಲಿ ಘೋಷಿಸುವ ಸಾಧ್ಯತೆ ಇದೆ. ಇನ್ನು ಬಜೆಟ್ ಟೀಂ ನಲ್ಲಿ ಹಣಕಾಸು ಕಾರ್ಯದರ್ಶಿಯಾಗಿರುವ ರಾಜೀವ್ ಕುಮಾರ್, ಆರ್ಥಿಕ ವ್ಯವಹಾರಗಳ ಕಾರ್ಯದರ್ಶಿಯಾಗಿರುವ ಅತನು ಚಕ್ರವರ್ತಿ , ಆಯವ್ಯಯ ಕಾರ್ಯದರ್ಶಿ ಟಿ ವಿ.ಸೋಮನಾಥನ್, ಕಂದಾಯ ಕಾರ್ಯದರ್ಶಿಯಾಗಿರುವ ಅಜಯ್ ಭೂಷಣ್ ಪಾಂಡೆ ಮತ್ತು ಮಾರಾಟ ವಹಿವಾಟು ಕಾರ್ಯದರ್ಶಿಯಾಗಿರುವ ತುಹಿನ್ ಕಾಂತ ಪಾಂಡೆ ಕೆಲಸಮಾಡುತ್ತಿದ್ದಾರೆ.