ಕರ್ನಾಟಕಕ್ಕೆ ಇನಿಂಗ್ಸ್ ಹಿನ್ನಡೆ....
ಹಿಮಾಚಲ ಪ್ರದೇಶ: ಇಲ್ಲಿನ ಗಂಗೋತ್ರಿ ಗ್ಲೇಡ್ಸ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಕರ್ನಾಟಕ 166 ರನ್ಗೆ ಆಲೌಟ್ ಆಗಿತ್ತು. ಬಳಿಕ ತನ್ನ ಮೊದಲ ಇನ್ನಿಂಗ್ಸ್ ಆರಂಭಿಸಿದ ಹಿಮಾಚಲ ಉತ್ತಮ ಆರಂಭ ಪಡೆದುಕೊಳ್ಳುವಲ್ಲಿ ಎಡವಿತಾದರು ಆಲ್ರೌಂಡರ್ ರಿಶಿ ಧವನ್ ಹಾಗೂ ಪ್ರಿಯಾಂನ್ಶು ಖಂಡೊರಿ ಅವರ ಆಟದ ನೆರವಿನಿಂದ ಮುನ್ನಡೆ ಸಾಧಿಸಿದೆ.ಪ್ರಿಯಾಂನ್ಶು 240 ಎಸೆತಗಳಲ್ಲಿ 8 ಬೌಂಡರಿಯೊಂದಿಗೆ 69 ರನ್ ಗಳಿಸಿ ಔಟ್ ಆದರು. ಇತ್ತ ಧವನ್ ತಂಡಕ್ಕೆ ಆಸರೆಯಾಗಿ ನಿಂತಿದ್ದು 96 ಎಸೆತಗಳಲ್ಲಿ 7 ಬೌಂಡರಿ, 3 ಸಿಕ್ಸರ್ ಬಾರಿಸಿ ಅಜೇಯ 72 ರನ್ ಗಳಿಸಿ ಮೂರನೇ ದಿನಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ. ಇವರ ಜೊತೆ ಆಕಾಶ್ ವಸಿಷ್ಠ 18 ರನ್ ಗಳಿಸಿ ಕ್ರೀಸ್ನಲ್ಲಿದ್ದಾರೆ.
ಎರಡನೇ ದಿನದಾಟದ ಅಂತ್ಯಕ್ಕೆ ಹಿ. ಪ್ರದೇಶ 7 ವಿಕೆಟ್ ಕಳೆದುಕೊಂಡು 235 ರನ್ ಕಲೆಹಾಕಿದೆ. 69 ರನ್ಗಳ ಮುನ್ನಡೆ ಸಾಧಿಸಿದೆ. ಕರ್ನಾಟಕ ಪರ ವಿ. ಕೌಶಿಕ್ 3 ವಿಕೆಟ್ ಕಿತ್ತರೆ, ಪ್ರತೀಕ್ ಜೈನ್ 2, ಅಭಿಮನ್ಯು ಮಿಥುನ್ ಹಾಗೂ ಜಗದೀಶ್ ತಲಾ 1 ವಿಕೆಟ್ ಪಡೆದಿದ್ದಾರೆ.ಇದಕ್ಕೂ ಮೊದಲು ಬ್ಯಾಟ್ ಮಾಡಿದ್ದ ಕರ್ನಾಟಕ ತಂಡ ಅಭಿನಯ್ ಸಿಂಗ್ ಬೌಲಿಂಗ್ ದಾಳಿಗೆ ತತ್ತರಿಸಿ ಹೋಯಿತು. ನಾಯಕ ಕರುಣ್ ನಾಯರ್ 81 ರನ್ ಗಳಿಸಿದ್ದು ಬಿಟ್ಟರೆ, ಶ್ರೇಯಸ್ ಗೋಪಾಲ್ 27 ರನ್ ಬಾರಿಸಿದ್ದೇ ಹೆಚ್ಚಾಗಿತ್ತು. ರಾಜ್ಯ ತಂಡ 67.2 ಓವರ್ನಲ್ಲಿ 166 ರನ್ಗೆ ಆಲೌಟ್ ಆಗಿತ್ತು.