ಕರ್ನಾಟಕ ಅಂಚೆ ಇಲಾಖೆಯಲ್ಲಿ ಆರ್ಥಿಕ ಬಿಕ್ಕಟ್ಟು, ಉತ್ತಮ ಸಾರ್ವಜನಿಕ ಸೌಕರ್ಯಗಳಿಗೆ ಅಡ್ಡಿ!

ಬೆಂಗಳೂರು: ಕರ್ನಾಟಕ ಅಂಚೆ ವೃತ್ತದಲ್ಲಿ  ಈ ವರ್ಷ ತೀವ್ರ ನಿಧಿಯ ಕೊರತೆಯಿಂದಾಗಿ ಸಾರ್ವಜನಿಕರಿಗೆ ಉತ್ತಮ ಸೌಕರ್ಯಗಳನ್ನು ಒದಗಿಸುವ ಪ್ರಯತ್ನದಲ್ಲಿ ಅಡಚಣೆಯಾಗಿದೆ. ಕಟ್ಟಡ ಕಾಮಗಾರಿ ಪೂರ್ಣಗೊಳಿಸಿರುವ ಗುತ್ತಿಗೆದಾರರು ಎರಡು ವರ್ಷ ಕಳೆದರೂ ಬಾಕಿ ಪಾವತಿ ಮಾಡದಿರುವ ಬಗ್ಗೆ ಕಾನೂನು ಕ್ರಮ ಜರುಗಿಸುವುದಾಗಿ ಬೆದರಿಕೆ ಹಾಕುತ್ತಿರುವುದು ಇದರ ಸಂಕಟವನ್ನು ಹೆಚ್ಚಿಸಿದೆ.

ಪ್ರಸಕ್ತ ಹಣಕಾಸು ವರ್ಷದಲ್ಲಿ ಅಂಚೆ ನಿರ್ದೇಶನಾಲಯದ ಮೂಲಕ ಕೇಂದ್ರವು 3.5 ಕೋಟಿ ರೂಪಾಯಿ ಬಿಡುಗಡೆ ಮಾಡಿದ್ದರೆ, ಇನ್ನೂ 4.63 ಕೋಟಿ ವೃತ್ತಕ್ಕೆ ಬರಬೇಕಿದೆ.

ಇದರಿಂದಾಗಿ ಕಾರವಾರ ಮುಖ್ಯ ಅಂಚೆ ಕಚೇರಿ, ವಿಜಯಪುರ ಮತ್ತು ಬಿಜೈಯಲ್ಲಿನ ಉಪ ಅಂಚೆ ಕಚೇರಿಗಳ ಹೊಸ ಕಟ್ಟಡ ನಿರ್ಮಾಣದ ಮೇಲೆ ಪರಿಣಾಮ ಬೀರಿದೆ ಎಂದು ಕರ್ನಾಟಕ ವೃತ್ತದ ಕಟ್ಟಡ ವಿಭಾಗದ ಹಿರಿಯ ಪೋಸ್ಟಲ್ ಅಧಿಕಾರಿಯೊಬ್ಬರು ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಗೆ ತಿಳಿಸಿದ್ದಾರೆ.

ಅವುಗಳು ಪ್ರಸ್ತುತ ಬಾಡಿಗೆಯಲ್ಲಿ ಕಾರ್ಯನಿರ್ವಹಿಸುತ್ತಿವೆ, ನಮಗೆ ಸ್ವಂತ ಕಟ್ಟಡಗಳು ಬೇಕಾಗಿವೆ. ನಿಧಿಯ ಕೊರತೆಯಿಂದಾಗಿ ಶೌಚಾಲಯ ಸೇರಿದಂತೆ ಮತ್ತಿತರ ಸಾರ್ವಜನಿಕ ಸೇವೆಗಳನ್ನು ಒದಗಿಸಲು ಸಾಧ್ಯವಾಗುತ್ತಿಲ್ಲ. ಮಳೆ ನೀರು ಸಂಗ್ರಹ ಕಟ್ಟಡವನ್ನು ಕೂಡಾ ನಿರ್ಮಾಣ ಮಾಡಬೇಕಾಗಿದೆ. ಫಂಡ್ ಬಿಡುಗಡೆಯಾಗದೆ ನಾವು ಯಾವುದೇ ಮೂಲಸೌಕರ್ಯ ಒದಗಿಸಲು ಸಾಧ್ಯವಿಲ್ಲ ಎಂದು ಅವರು ಹೇಳಿದ್ದಾರೆ.

ಅಂಚೆ ನಿರ್ದೇಶನಾಲಯದಿಂದ  ಬರಬೇಕಾಗಿರುವ ಒಟ್ಟು 4.63 ಕೋಟಿ ರೂ.ಗಳಲ್ಲಿ 63.7 ಲಕ್ಷ ರೂ.ಗಳನ್ನು ಕೆಲವು ಗುತ್ತಿಗೆದಾರರಿಗೆ ಪಾವತಿಸಬೇಕಾಗಿದೆ. ಅವರು ಹಲವಾರು ಕೆಲಸಗಳನ್ನು ಪೂರ್ಣಗೊಳಿಸಿದ್ದು, ಪಾವತಿಗಾಗಿ ಕಾಯುತ್ತಿದ್ದಾರೆ. ಕೆಲವು ಯೋಜನೆಗಳು 2019-2020ರಲ್ಲಿ ಪೂರ್ಣಗೊಂಡಿದ್ದರೆ ಕೆಲವು 2020-2021ರಲ್ಲಿ ಪೂರ್ಣಗೊಂಡಿವೆ. ಬಾಕಿ ಇರುವ ಬಾಕಿಗಾಗಿ ನಮ್ಮ ವೃತ್ತದ  ವಿರುದ್ಧ ಕೇಸು ದಾಖಲಿಸುವುದಾಗಿ ಬೆದರಿಕೆ ಹಾಕುತ್ತಿದ್ದಾರೆ ಎಂದು ಅವರು ಹೇಳಿದರು.

ಉತ್ತರ ಕರ್ನಾಟಕ, ದಕ್ಷಿಣ ಕರ್ನಾಟಕ ಮತ್ತು  ಬೆಂಗಳೂರು ಪ್ರದೇಶದಲ್ಲಿ ತಲಾ ಎರಡರಂತೆ ಆರು ಉಪ ಅಂಚೆ ಕಚೇರಿಗಳ ಕಟ್ಟಡಗಳು ಪೂರ್ಣಗೊಂಡಿವೆ. ಸತ್ತೂರು, ರಾಣಿ ಚನ್ನಮ್ಮ ನಗರ, ಟಿ ನರಸೀಪುರ, ಶಂಕರ ನಾರಾಯಣ, ಹಾರೋಹಳ್ಳಿ ಮತ್ತು ಸೂಲಿಬೆಲೆಯಲ್ಲಿ ಈಗ ಹೊಸ ಕಚೇರಿಗಳು ಅಸ್ತಿತ್ವದಲ್ಲಿವೆ.

                                                                                                                    -abhijna