ವಾರಕ್ಕೆ 4 ದಿನಗಳ ಕೆಲಸ ಪದ್ದತಿಗೆ ಸರಕಾರದ ಸಮ್ಮತಿ

ಮುಂದಿನ ದಿನಗಳಲ್ಲಿ ಐಟಿಯೇತರ ಕಂಪನಿಗಳಲ್ಲೂ ಉದ್ಯೋಗಿಗಳ ಕೆಲಸದ  ವೇಳೆ ಹಾಗೂ ದಿನಗಳಲ್ಲಿ ಅಗತ್ಯಾನುಸಾರ ಬದಲಾವಣೆಯಾಗಲಿದೆ. ಅವಶ್ಯವಿದ್ದರೆ, ವಾರಕ್ಕೆ ಗರಿಷ್ಠ 48 ಗಂಟೆಗಳ ಅವಧಿಯಲ್ಲಿ 4 ದಿನಗಳ ಕೆಲಸದ ಪದ್ದತಿಯನ್ನು ಅನುಸರಿಸಲು ಕೇಂದ್ರ ಕಾರ್ಮಿಕ ಸಚಿವಾಲಯ ಅನುಮೋದಿಸಿದೆ. ವಿಷಯದ ಅಂತಿಮ ತೀರ್ಮಾನ ಶೀಘ್ರದಲ್ಲಿ ಪ್ರಕಟವಾಗಲಿದೆ.

ಪದ್ದತಿಯಲ್ಲಿ ವಾರಕ್ಕೆ 48 ತಾಸುಗಳ ಗರಿಷ್ಠ ಮಿತಿ ಎಂದರೆ, ದಿನಕ್ಕೆ 12 ತಾಸುಗಳು ಕೆಲಸವಿರುತ್ತದೆ. ಉಳಿದ 3 ದಿನಗಳ ರಜೆಗಳು ವೇತನ ಸಹಿತವಾಗಿರಬೇಕು ಎಂದು ಕೇಂದ್ರ ಸರ್ಕಾರ ಸೂಚಿಸಿದೆ. ಉದ್ಯೋಗಿಗಳ ಒಪ್ಪಿಗೆ ಪಡೆದ ನಂತರ ನಿಯಮವನ್ನು ಜಾರಿಗೊಳಿಸಬೇಕಾಗುತ್ತದೆ ಎಂದು ಕಾರ್ಮಿಕ ಕಾರ್ಯದರ್ಶಿ ಅಪೂರ್ವ ಚಂದ್ರ ತಿಳಿಸಿದ್ದಾರೆ.

ಪ್ರಸ್ತುತ ಇಲ್ಲಿಯವರೆಗೂ ಎಲ್ಲಾ ಕಂಪನಿಗಳು ವಾರಕ್ಕೆ  ಗರಿಷ್ಠ 48 ಗಂಟೆಗಳ ಮಿತಿಯಲ್ಲಿ, ವಾರಕ್ಕೆ 6 ದಿನಗಳ ಕೆಲಸ ಹಾಗೂ ದಿನಕ್ಕೆ 8 ಗಂಟೆಗಳ ಕೆಲಸದ ಅವಧಿಯನ್ನು ಹೊಂದಿರಬೇಕಾಗುತ್ತದೆ.

ಇಲ್ಲಿಯವರೆಗೆ ಐಟಿ ಕಂಪನಿಗಳಲ್ಲಿ ಮಾತ್ರ ದುಡಿಮೆಯ ಅವಧಿಗಳಲ್ಲಿ  ಸಡಿಲ ನೀತಿ ಜಾರಿಯಲ್ಲಿತ್ತು. ಆದರೆ ಹೊಸ ಕಾರ್ಮಿಕ ನೀತಿಗಳ ಪ್ರಕಾರ ಇತರ ಉತ್ಪಾದಕ ವಲಯಗಳಲ್ಲೂ ಅವಶ್ಯಕತೆಯನ್ನು ಆಧರಿಸಿ ಕೆಲಸದ ಅವಧಿಯನ್ನು ನಿರ್ಧರಿಸಬಹುದು. ಇದರಿಂದ ಕಂಪನಿಗಳ ಉತ್ಪಾದಕತೆಯನ್ನು ವೃದ್ಧಿಸಲು ಸಹಾಯವಾಗಲಿದೆ ಎನ್ನುತ್ತಾರೆ ಎಫ್ ಕೆ ಸಿ ಸಿ ಮಾಜಿ ಅಧ್ಯಕ್ಷ ಡಾ.ಜೆ.ಕ್ರಾಸ್ಟಾ.

ಉತ್ಪಾದಕ ವಲಯದ ಕೆಲ ಕಂಪನಿಗಳಲ್ಲಿ ತುರ್ತು ಪರಿಸ್ಥಿತಿಯ ಕೆಲಸಗಳಿದ್ದರೆ ಹೆಚ್ಚು ತಾಸುಗಳ ಅಗತ್ಯ ಇರುತ್ತದೆ. ಅಂತಹ ಪರಿಸ್ಥಿತಿಯಲ್ಲಿ ದಿನಕ್ಕೆ 12 ಗಂಟೆಗಳ ಕಾಲ ಕೆಲಸ ಉಪಯುಕ್ತವಾಗುತ್ತದೆ ಎನ್ನುತ್ತಾರೆ ಕ್ರಾಸ್ಟಾ.

ಚೀನಾದ ಅನೇಕ ಕಾರ್ಖಾನೆಗಳಲ್ಲೂ ರೀತಿಯ ಪದ್ಧತಿ ಇದೆ. ಅಲ್ಲಿ ಕಾನೂನಿಗಿಂತಲ್ಲೂ ಕಠಿಣ ಪರಿಸ್ಥಿತಿಯನ್ನು ಅಲ್ಲಿನ ಕಾರ್ಮಿಕರು ಎದುರಿಸುತ್ತಿದ್ದಾರೆ ಎಂದು ಮಾಜಿ ಅಧ್ಯಕ್ಷ ಡಾ.ಜೆ.ಕ್ರಾಸ್ಟಾ ಹೇಳಿದ್ದಾರೆ.

ವರದಿ: ನವಿತ