ನಾನೊಂಥರಾ : ಪ್ರೇಕ್ಷಕರಿಗೆ ಬೇಸರ
ನಾನೊಂಥರಾ ಚಿತ್ರ ಹೊಸಬರ ಒಂದು ಸಾಧಾರಣ ಚಿತ್ರ. ಸಮಾಜದಲ್ಲಿ ನಡೆಯುತ್ತಿರುವ ಅಮಾನವೀಯತೆಯ ಸನ್ನಿವೇಶಗಳನ್ನು ನಿರ್ದೇಶಕ ರಮೇಶ್ ತೆರೆಮೇಲೆತರುವ ಪ್ರಯತ್ನ ಮಾಡಿದ್ದಾರೆ. ಚಿತ್ರದಲ್ಲಿ ನಾಯಕನಟ ತಾರಕ್ ಶೇಖರಪ್ಪ ಮೊದಲಬಾರಿಗೆ ಬಣ್ಣ ಹಚ್ಚಿದ್ದಾರೆ. ನಾಯಕ ನಟಿ ರಕ್ಷಿಕಾ ವೇದ್ಯೆಯಾಗಿ ಕಾಣಿಸಿಕೊಂಡಿದ್ದಾರೆ.
ಚಿತ್ರದುದ್ದಕ್ಕೂ ಜನ ಸಾಮಾನ್ಯರ ನಿಜ ಜೀವನದಲ್ಲಿ ನಡೆಯುವ ಘಟನೆಗಳು ಹೆಚ್ಚಾಗಿ ಕಣ್ಣಿಗೆ ಬೀಳುತ್ತದೆ. ಚಿತ್ರ ಕಥೆಯೇ ಚಿತ್ರದ ಜೀವಾಳವಾಗಿರುತ್ತದೆ, ಆದರೆ ಈ ಚಿತ್ರ ಎಲ್ಲೋ ಒಂದು ಕಡೆ ತನ್ನ ಜೀವವನ್ನೇ ಕಳೆದುಕೊಂಡಂತೆ ಭಾಸವಾಗುತ್ತದೆ. ಸಿನಿಮಾದ ಸಂಭಾಷಣೆಗಳು ಪ್ರೇಕ್ಷಕರನ್ನು ಕೊಂಚ ಸುಧಾರಿಸುವಂತಿದೆ. ಚಿತ್ರದ ಹಾಡಿಗೂ ಮತ್ತು ಸನ್ನಿವೇಶಕ್ಕೂ ಸಂಬಂಧವೇ ಇಲ್ಲ. ಪ್ರೇಕ್ಷಕರ ಹೃದಯಕ್ಕೆ ತಾಗುವ ಹಾಡುಗಳನ್ನ ಕೊಡುವುದರಲ್ಲಿ ಚಿತ್ರ ತಂಡ ವಿಫಲವಾಗಿದೆ.
ಸಿನಿಮಾದ ನಾಯಕ ನಟ ಒಳ್ಳೆ ಮನಸ್ಸಿರುವ ಮದ್ಯ ಪ್ರಿಯನಾಗಿದ್ದು , ಪ್ರಭಲವಾದ ಕಾರಣಕ್ಕೆ ರೌಡಿಗಳನ್ನ ಹೊಡೆಯುತ್ತಿರುತ್ತಾನೆ. ಮಾನವೀಯತೆಯನ್ನ ಮರೆತ ಜನರಿಗೆ ಇವನು ಸರಿಯಾದ ಪಾಠ ಕಲಿಸುತ್ತಾನೆ, ನಂತರ ನಾಯಕಿಯ ಭೇಟಿ, ಭೇಟಿ ಪ್ರೀತಿಯಾಗಿ ಮಾರ್ಪಡುತ್ತದೆ. ನಾಯಕನ ತಂದೆ ತನ್ನ ಮಗನನ್ನು ಸಂಪೂರ್ಣವಾಗಿ ಬದಲಾವಣೆ ಮಾಡಲು ಪ್ರಯತ್ನಿಸುತ್ತಿದ್ದು, ಇದಕ್ಕೆ ಹೀರೋ ಪ್ರೀತಿಸುತ್ತಿರುವ ಪ್ರೇಯಸಿಯು ಸಹ ಸಾಥ್ ನೀಡುತ್ತಾಳೆ. ಕೊನೆಗೆ ನಾಯಕ ಪೂರ್ಣಪ್ರಮಾಣದಲ್ಲಿ ಬದಲಾಗುತ್ತಾನೆ. ಇದು ಚಿತ್ರ ಕಥೆಯ ಸಾರಾಂಶ.
ಡೈನಮಿಕ್ ಸ್ಟಾರ್ ದೇವರಾಜ್ ತಂದೆಯ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ. ಕಥೆ ಹಾಗು ಸಂದರ್ಭಕ್ಕೆ ಅನುಸಾರವಾಗಿ ಹೀರೋ ಹಾಗೂ ಹಿರೋಯಿನ್ ಅಭಿನಯಿಸಿದ್ದಾರೆ. ಪ್ರೇಕ್ಷಕರಿಗೆ ಮನೋರಂಜನೆ ನೀಡುವುದರಲ್ಲಿ ನಿರ್ದೇಶಕ ಬಹಳ ಎಡವಿದ್ದಾರೆ ಅಂತ ಹೇಳಬಹುದಾಗಿದೆ.
ವರದಿ: ಹೆಚ್. ಶ್ರೀ ಹರ್ಷ