ಭಾರತದ ಆಟಗಾರರನ್ನು ಹುಲಿಗಳು ಎಂದ ಕೋಚ್ ರವಿಶಾಸ್ತ್ರಿ
ಟಿ-20 ಮಾದರಿಯಲ್ಲಿ ದೈತ್ಯ ತಂಡವೆಂದು ಹೆಸರು ಪಡೆದಿರುವ ವೆಸ್ಟ್ ಇಂಡೀಸ್ ತಂಡದ ವಿರುದ್ಧ ಮೂರು ಪಂದ್ಯಗಳ ಟಿ-20 ಸರಣಿಯನ್ನು 2-1 ಅಂತರದಲ್ಲಿ ಜಯಿಸಿದ ಭಾರತ ತಂಡದ ಆಟಗಾರರನ್ನು ಕೋಚ್ ರವಿಶಾಸ್ತ್ರಿ ಹುಲಿಗಳಂತೆ ಆಡಿದಿರಿ ಎಂದು ತಮ್ಮ ಟ್ವಿಟರ್ ಅಕೌಂಟ್ ನಲ್ಲಿ ಶ್ಲಾಘಿಸಿದ್ದಾರೆ.
ಸರಣಿ ಮುಗಿದು ಎರಡು ದಿನಗಳ ಬಳಿಕ ರವಿಶಾಸ್ತ್ರಿ ತಮ್ಮ ಹರ್ಷ ವ್ಯಕ್ತಪಡಿಸಿ ಹುಲಿಗಳಂತೆ ಆಡಿದಿರಿ ಎಂದು ಬರೆದುಕೊಳ್ಳುವ ಮೂಲಕ ಕೊಹ್ಲಿ ಪಡೆಯ ಬೆನ್ನುತಟ್ಟಿದ್ದಾರೆ.
ಮೊದಲ ಪಂದ್ಯದಲ್ಲಿ ವೆಸ್ಟ್ಇಂಡೀಸ್ ಗಳಿಸಿದ 208 ರನ್ ಗಳನ್ನು ಬೆನ್ನತ್ತಿ ಭಾರತ ಗೆದ್ದಿತ್ತು, ಈ ಪಂದ್ಯದಲ್ಲಿ ನಾಯಕ ವಿರಾಟ್ ಕೊಹ್ಲಿ 94 ರನ್ ಗಳಿಸಿ 8 ಎಸೆತಗಳು ಬಾಕಿ ಇರುವಂತೆಯೇ 6 ವಿಕೆಟ್ ಗಳ ಗೆಲುವು ಸಾಧ್ಯವಾಗಿತ್ತು. ಎರಡನೇ ಪಂದ್ಯದಲ್ಲಿ 170 ರನ್ ಗಳಿಸಿದರು ಕಳಪೆ ಫೀಲ್ಡಿಂಗ್ ನಿಂದ ಭಾರತ ಸೋಲಿನ ಸುಳಿಗೆ ಸಿಲುಕಿತು. ಸರಣಿಯ ಫೈನಲ್ ಎನಿಸಿದ್ದ ಮೂರನೇ ಪಂದ್ಯದಲ್ಲಿ ರೋಹಿತ್ ಶರ್ಮಾ, ಕೆ ಎಲ್ ರಾಹುಲ್, ವಿರಾಟ್ ಕೊಹ್ಲಿಯ ಅಬ್ಬರದ ಆಟದಿಂದ 67 ರನ್ ಗಳಿಂದ ಭಾರತ ಸರಣಿ ತನ್ನದಾಗಿಸಿಕೊಂಡಿತು. ಈ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ನಾಯಕ ಕೇರನ್ ಪೊಲಾರ್ಡ್ 68 ರನ್ ಗಳಿಸಿ ಹೋರಾಟ ನಡೆಸಿದ್ದರು.