ಅಧಿಕಾರ ಮತ್ತು ಶ್ರೀಮಂತಿಕೆಯನ್ನು ಪೂಜಿಸುವ ಸಮಾಜದಲ್ಲಿ ನಾವಿದ್ದೇವೆ : ಸಂತೋಷ್ ಹೆಗ್ಡೆ.
ಬೆಂಗಳೂರು : ಇಂದು ಸಮಾಜದಲ್ಲಿ ಪ್ರಾಮಾಣಿಕತೆ ಕಡಿಮೆಯಾಗಿದೆ. ಜನರಲ್ಲಿ ದುರಾಸೆ ಹೆಚ್ಚಿದೆ. ಇದಕ್ಕೆ ಕಾರಣ ನಾವಿಂದು ಅಧಿಕಾರ ಮತ್ತು ಶ್ರೀಮಂತಿಕೆಯನ್ನು ಪೂಜಿಸುವ ಸಮಾಜದ ಭಾಗವಾಗಿದ್ದೇವೆ ಎಂದು ನಿವೃತ್ತ ನ್ಯಾಯಮೂರ್ತಿ ಸಂತೋಷ್ ಹೆಗ್ಡೆ ಹೇಳಿದರು.
ಮಂಗಳವಾರ ನಗರದ ನ್ಯಾಷನಲ್ ಕಾಲೇಜ್ ಸಭಾಂಗಣದಲ್ಲಿ ಅಲ್ಮಾ ಮೀಡಿಯಾ ಸ್ಕೂಲ್ ಸಹಯೋಗದಲ್ಲಿ ಆಯೋಜಿಸಿದ್ದ " ಪರಿಣಾಮಕಾರಿ ಮಾಧ್ಯಮ ಮತ್ತು ಸಾರ್ವಜನಿಕ ಸಂಪರ್ಕ" ಕುರಿತಾದ ಕಾರ್ಯಗಾರವನ್ನು ಉದ್ಘಾಟಿಸಿ ಮಾತನಾಡಿದ ಸಂತೋಷ್ ಹೆಗ್ಡೆ "ಎಲ್ಲರಿಗೂ ಶ್ರೀಮಂತಿಕೆಯನ್ನು ಗಳಿಸುವ ಹಕ್ಕಿದೆ. ಆದರೆ ಅದು ನ್ಯಾಯದ ಮಾರ್ಗವಾಗಿರಬೇಕು. ಇನ್ನೊಬ್ಬರ ಹೊಟ್ಟೆ ಮೇಲೆ ಹೊಡೆದು, ಇನ್ನೊಬ್ಬರ ಜೇಬಿಗೆ ಕೈ ಹಾಕಿ ಯಾವತ್ತೂ ಹಣ ಗಳಿಸಬಾರದು. ಇಂದು ಜನರಲ್ಲಿ ದುರಾಸೆ ಹೆಚ್ಚುತ್ತಿರುವುದೇ ಭ್ರಷ್ಟಾಚಾರಕ್ಕೆ ಕಾರಣವಾಗಿದೆ. ಶಾಸಕಾಂಗ , ಕಾರ್ಯಂಗ , ನ್ಯಾಯಾಂಗ ಮತ್ತು ಮಾಧ್ಯಮ ಹೀಗೆ ಎಲ್ಲಾ ಕ್ಷೇತ್ರಗಳಲ್ಲಿ ಭ್ರಷ್ಟರು ತುಂಬಿದ್ದಾರೆ. ಆದ್ದರಿಂದ ಮುಂದಿನ ಪೀಳಿಗೆಯವರು , ಯಾವುದೇ ಕ್ಷೇತ್ರವಾದರು ಸರಿ ದುರಾಸೆಗೆ ಬೀಳದೆ ತೃಪ್ತಿ ಹಾಗೂ ಮಾನವೀಯತೆ ಈ ಎರಡು ಅಂಶಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ನ್ಯಾಯಯುತವಾಗಿ ಕಾರ್ಯನಿರ್ವಹಿಸಬೇಕು ಎಂದು ಸಲಹೆ ನೀಡಿದರು.
ಇನ್ನು ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಮಾಜಿ ಪೋಲೀಸ್ ಆಯುಕ್ತ ಶಂಕರ್ ಬಿದರಿ ಆಗಮಿಸಿದ್ದರು. ಕಾರ್ಯಕ್ರಮದಲ್ಲಿ ಪತ್ರಕರ್ತ ಹಾಗೂ ಅಲ್ಮಾ ಫೌಂಡೆಷನ್ ಸಂಸ್ಧಾಪಕರಾದ ಗೌರೀಶ ಅಕ್ಕಿ , ನ್ಯಾಷನಲ್ ಕಾಲೇಜ್ ನ ಪತ್ರಿಕೊದ್ಯಮ ವಿಭಾಗದ ಮುಖ್ಯಸ್ಥರಾದ
ಡಾ. ಎಸ್.ಜಯಸಿಂಹ ಹಾಗೂ ನ್ಯಾಷನಲ್ ಕಾಲೇಜ್ ಪ್ರಾಂಶುಪಾಲರಾದ ಡಾ. ಬಿ.ಆರ್ ಪರಿಣಿತ
ಉಪಸ್ಥಿತರಿದ್ದರು.