ವಾಷಿಂಗ್ ಪೌಡರ್ ನಿರ್ಮಾ ಹುಟ್ಟಿದ ಕಥೆ.....
"ವಾಶಿಂಗ್ ಪೌಡರ್ ನಿರ್ಮಾ"ಹುಟ್ಟಿದ ಕಥೆ....!
ಏಪ್ರಿಲ್ 13,1944 ರಲ್ಲಿ ಅಹಮದಬಾದ್ ನ
ಬಡ ಕುಟುಂಬದಲ್ಲಿ ಹುಟ್ಟಿದ ಕರ್ಸನ್ ಭಾಯಿ ಪಟೇಲ್, ರಸಾಯನಶಾಸ್ತ್ರದಲ್ಲಿ ಬಿಎಸ್ಸಿ ಪದವಿಯನ್ನು ಗಳಿಸುತ್ತಾರೆ. ನಂತರ ಅಹಮದಬಾದ್ ನ ಲ್ಯಾಬ್ ವೊಂದರಲ್ಲಿ ಸಹಾಯಕನಾಗಿ ಹುದ್ದೆಯನ್ನು ಪಡೆಯುತ್ತಾರೆ. ಆದರೆ ಈ ಕೆಲಸದಲ್ಲಿ ನೆಮ್ಮದಿಯಿಲ್ಲದೆ ಏನಾದರೂ ಒಂದು ಸಾಧನೆ ಮಾಡಬೇಕೆನ್ನುವ ಯೋಚನೆಯಲ್ಲಿ ಇರುತ್ತಿದ್ದ ಕರ್ಸನ್ ಭಾಯಿ ಪಟೇಲ್ ರಿಗೆ ಕಡಿಮೆ ಖರ್ಚಿನಲ್ಲಿ ಉತ್ತಮ ಗುಣಮಟ್ಟವುಳ್ಳ ಡಿಟರ್ಜೆಂಟ್ ಪೌಡರ್ ವೊಂದನ್ನು ತಯಾರಿಸಬೇಕು ಎನ್ನುವ ಯೋಚನೆ ಬರುತ್ತದೆ.
ಕೆಮೆಸ್ಟ್ರಿ ವಿದ್ಯಾರ್ಥಿಯಾಗಿದ್ದ ಕಾರಣ ಕರ್ಸನ್ ಭಾಯಿ ಪಟೇಲ್ ಬಿಡುವಿನ ವೇಳೆಯಲ್ಲಿ ಕೆಮಿಕಲ್ ಗಳನ್ನು ಇತರ ಪರಿಕರಗಳನ್ನು ಬಳಿಸಿಕೊಂಡು ಡಿಟರ್ಜೆಂಟ್ ತಯಾರಿಸುವ ನಿಟ್ಟಿನಲ್ಲಿ ನಾನಾ ಬಗೆಯ ವಿಧಾನಗಳಲ್ಲಿ ಪ್ರಯೋಗವನ್ನು ಮಾಡಲು ಶುರು ಮಾಡುತ್ತಾರೆ. ಪ್ರತಿಫಲವಾಗಿ ಹಳದಿ ಬಣ್ಣದ ಡಿಟರ್ಜೆಂಟ್ ಪೌಡರ್ ಒಂದನ್ನು ತಯಾರಿಸಿಯೇ ಬಿಡುತ್ತಾರೆ.ಕರ್ಸನ್ ಭಾಯಿ ತಯಾರಿಸಿದ ಹಳದಿ ಬಣ್ಣದ ಪೌಡರ್ ಸಣ್ಣ ಪಾಕೆಟ್ ನಲ್ಲಿ ಊರ ಮಂದಿಗೆ ಬರೀ 3 ರೂಪಾಯಿಗೆ ಒಂದು ಕೆ.ಜಿಯಂತೆ ಮಾರುತ್ತಾರೆ.
ಇಷ್ಟು ಮಾತ್ರವಲ್ಲದೆ ಆ ಪೌಡರ್ ಅನ್ನು ಜನರ ಬಳಿಗೆ ತಲುಪಲು ಅದನ್ನು ಸೈಕಲ್ ನಲ್ಲಿ ಮಾರಾಟ ಮಾಡಲು ಪ್ರಾರಂಭಿಸುತ್ತಾರೆ.
ಅದೇ ಸಮಯದಲ್ಲಿ ಹಿಂದೂಸ್ಥಾನ್ ಲಿವರ್ ಕಂಪೆನಿಯ ಡಿಟರ್ಜೆಂಟ್ ಪೌಡರ್ ಮಾರುಕಟ್ಟೆಯಲ್ಲಿ ಸಾಕಷ್ಟು ಜನಪ್ರಿಯವಾಗಿತ್ತು. ಆದರೆ ಕಡಿಮೆ ದರದಲ್ಲಿ ಮಾರಾಟ ಮಾಡುತ್ತಿದ್ದ ಕರ್ಸನ್ ಭಾಯಿ ತಯಾರಿಸಿದ ಪೌಡರ್ ಉತ್ತಮ ಗುಣಮಟ್ಟದಿಂದ ಜನರ ಮನ ಗೆದ್ದಿತ್ತು. ಇವರ ಪೌಡರ್ ಬಗ್ಗೆ ಎಷ್ಟು ವಿಶ್ವಾಸವಿತ್ತು ಎಂದರೆ ಗ್ರಾಹಕರಿಗೆ ಇಷ್ಟವಾಗದಿದ್ದಲ್ಲಿ ಹಣ ವಾಪಸ್ ಕೊಡುತ್ತೇನೆ ಎನ್ನುತ್ತಿದ್ದರು.
ಜೀವನದಲ್ಲಿ ಏನಾದರೂ ಸಾಧಿಸಬೇಕೆನ್ನುವ ವ್ಯಕ್ತಿಗೆ ನೂರಾರು ಪೆಟ್ಟುಗಳು ಆತ್ಮವಿಶ್ವಾಸಕ್ಕೆ ಬರೆ ಎಳೆದು ಬಿಡುತ್ತವೆ. ಕರ್ಸನ್ ಭಾಯಿ ಪಟೇಲ್ ಜೀವನದಲ್ಲಿ ಹೆಚ್ಚಾಗಿ ಪ್ರೀತಿಸುತ್ತಿದದ್ದು ತನ್ನ ಮಗಳು ನಿರುಪಮಾಳನ್ನು.ನಿರುಪಮಾ ಅದೊಂದು ದಿನ ಕಾರು ಅಪಘಾತದಲ್ಲಿ ಗಂಭೀರ ಗಾಯಗೊಂಡು ಸಾವನ್ನಪ್ಪುತ್ತಾರೆ. ಇದು ಕರ್ಸನ್ ಭಾಯಿ ಜೀವನದಲ್ಲಿ ಕರಾಳ ನೋವಿನ ನೆನಪಾಗಿ ಉಳಿಯುತ್ತದೆ.ಕೈಯಾರೆ ಆಡಿಸಿ, ಮುದ್ದಿಸಿ, ಬೆಳೆಸಿದ ಮಗಳು ನಿರುಪಮಾರನ್ನು ಲೋಕ ಗುರುತಿಸುವ ವ್ಯಕ್ತಿಯನ್ನಾಗಿ ಮಾಡಬೇಕು ಎನ್ನುವುದು ಕರ್ಸನ್ ಭಾಯಿ ಕನಸು ಆಗಿತ್ತು.
ಕರ್ಸನ್ ಭಾಯಿ ತಾನು ತಯಾರಿಸಿದ ಡಿಟರ್ಜೆಂಟ್ ಪೌಡರ್ ಗೆ 'ನಿರ್ಮಾ' ಎಂದು ಹೆಸರಿಡುತ್ತಾರೆ.ಯಾಕೆಂದರೆ ತನ್ನ ಮಗಳನ್ನು ಪ್ರೀತಿಯಿಂದ ನಿರ್ಮಾ ಎಂದು ಕರೆಯುತ್ತಿದ್ದರು.ಕರ್ಸನ್ ಭಾಯಿ ಅಂದಿನ ಕಾಲದಲ್ಲಿ ಜನಮನದಲ್ಲಿ ಬೇರೂರಿದ್ದ ದೂರದರ್ಶನದಲ್ಲಿ ನಿರ್ಮದ ಕುರಿತು ಜಾಹೀರಾತು ನೀಡುತ್ತಾರೆ. 'ಸಬ್ಕಿ ಪಸಂದ್ ನಿರ್ಮಾ, ವಾಷಿಂಗ್ ಪೌಡರ್ ನಿರ್ಮ.' ಈ ಹಾಡಿನ ಜಾಹೀರಾತು ಬಂದಾಗ ಪ್ರತಿಯೊಬ್ಬರ ತುಟಿ ತನ್ನಷ್ಟಗೆ ಮುಂದುವರೆದು ನಿರ್ಮಾದ ಜಾಹೀರಾತನ್ನು ಹಾಡುವಷ್ಟು ಪ್ರಸಿದ್ಧಿ ಆಗುತ್ತದೆ.ನಿರ್ಮಾದ ಜಾಹೀರಾತು ಜನಪ್ರಿಯ ನಟ ನಟಿಯರಿಂದ ಆಗುತ್ತದೆ. ನಿರ್ಮಾ ಮಾರುಕಟ್ಟೆಯಲ್ಲಿ ಬೇಡಿಕೆಯ ಬ್ರ್ಯಾಂಡ್ ಆಗುತ್ತದೆ.
ನಿರ್ಮಾ ಪ್ಯಾಕೆಟ್ ನಲ್ಲಿ ಮಗಳ ರೇಖಾ ಚಿತ್ರವನ್ನು ಸೃಷ್ಟಿಸುತ್ತಾರೆ.ಮಗಳ ಹೆಸರು ನಿರ್ಮಾ ರೂಪದಲ್ಲಿ ಪ್ರಸಿದ್ದಿಗಳಿಸುತ್ತದೆ.ನಿರ್ಮಾ ಬ್ರ್ಯಾಂಡ್ ಎಷ್ಟು ಜನಪ್ರಿಯವಾಗುತ್ತದೆ ಎಂದರೆ ಮಾರುಕಟ್ಟೆಯಲ್ಲಿ ನಿರ್ಮಾ ಹೆಸರಿನಲ್ಲಿ ನಿರ್ಮಾ ಉಪ್ಪು, ನಿರ್ಮಾಸಕ್ಕರೆ, ನಿರ್ಮಾ ಸೋಪ್ .. ಹೀಗೆ ನಿರ್ಮಾದ ವಿವಿಧ ಪ್ರಾಡೆಕ್ಟ್ ಗಳು ಲಗ್ಗೆಯಿಡುತ್ತವೆ.ಇಂದು ಸುಮಾರು 17 ಸಾವಿರಕ್ಕೂ ಹೆಚ್ಚು ಮಂದಿ ನಿರ್ಮಾ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದಾರೆ. ವಾರ್ಷಿಕವಾಗಿ ಕೋಟಿಗಟ್ಟಲೆ ಆದಾಯವನ್ನು ನಿರ್ಮಾಗಳಿಸುತ್ತಿದೆ.