ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ಚನ್ನವೀರ ಕಣವಿ ....
ಧಾರವಾಡ :ಪೌರತ್ವ ತಿದ್ದುಪಡಿ ಕಾಯ್ದೆಗೆ ಹಿರಿಯ ಕವಿ ಚನ್ನವೀರ ಕಣವಿ ವಿರೋಧ ವ್ಯಕ್ತಪಡಿಸಿದ್ದಾರೆ. "ಸಾಮಾಜಿಕ ಸಾಮರಸ್ಯದ ದೃಷ್ಟಿಯಿಂದ ಇದನ್ನು ಕೈಬಿಡಬೇಕು" ಎಂದು ಅವರು ಆಗ್ರಹಿಸಿದ್ದಾರೆ. "ಪೌರತ್ವ ತಿದ್ದುಪಡಿ ಕಾಯ್ದೆ, ರಾಷ್ಟ್ರೀಯ ಪೌರತ್ವ ನೋಂದಣಿಯನ್ನು ಸಾಮಾಜಿಕ ಸಾಮರಸ್ಯದ ದೃಷ್ಟಿಯಿಂದ ಕೈ ಬಿಡಬೇಕು. ಇದನ್ನು ವಿರೋಧಿಸಿ ನಡೆದ ಪ್ರತಿಭಟನೆ ವೇಳೆ ನಡೆದಿರುವ ದೌರ್ಜನ್ಯದ ಕುರಿತ ಸಾರ್ವಜನಿಕ ದೂರುಗಳನ್ನು ವಿಚಾರಣೆ ನಡೆಸಬೇಕು" ಎಂದು ಚನ್ನವೀರ ಕಣವಿ ಒತ್ತಾಯಿಸಿದ್ದಾರೆ.
"ದೇಶಕ್ಕೆ ಸಮೃದ್ಧಿ ತರಲು ಸಾಮಾಜಿಕ ಸೌಹಾರ್ದತೆ ಅತ್ಯಗತ್ಯವಾಗಿದೆ. ಅಶಾಂತಿ, ಕೋಮು ಬಿಕ್ಕಟ್ಟು, ಕ್ಷೋಭೆ, ಭವಿಷ್ಯದ ಬಗ್ಗೆ ಚಿಂತೆ ಇತ್ಯಾದಿಗಳನ್ನು ಉತ್ಪಾದಿಸುವ ಕಾನೂನುಗಳನ್ನು ಪ್ರಗತಿ ವಿರೋಧಿ ಹಾಗೂ ಜನ ವಿರೋಧಿ ಎಂದೇ ಭಾವಿಸಬಹುದು" ಎಂದು ಹೇಳಿದ್ದಾರೆ."ಎಲ್ಲಾ ಜಾತಿ, ಮತ, ಪಂಥಗಳನ್ನೂ ಮೀರಿದ ಸಂತರಿಂದ ಅನುಭಾವಿಗಳಿಂದ ನಮ್ಮ ಆಧ್ಮಾತ್ಮಿಕ ಜಗತ್ತು ಅದೇ ರೀತಿ ಸಾಹಿತ್ಯ, ಸಂಗೀತ, ಕಲಾ ಪ್ರಪಂಚ ಸಂಪದ್ಭರಿತವಾಗಿದೆ. ಜಾತಿ, ಮತಗಳ ಭಾವನೆಯ ಬೀಜ ಬಿತ್ತುವುದು ನಮ್ಮ ಪರಂಪರೆಗೆ ಬಗೆಯುವ ದ್ರೋಹ" ಎಂದು ಕಣವಿ ವ್ಯಾಖ್ಯಾನಿಸಿದ್ದಾರೆ.
"ಸದ್ಯ ದೇಶದಲ್ಲಿ ಅಶಾಂತಿ, ಹಾಹಾಕಾರ ಉಂಟು ಮಾಡಿದ ಪೌರತ್ವ ಸಂಬಂಧಿತ ಎಲ್ಲಾ ಕಾನೂನು, ಕಾರ್ಯಕ್ರಮಗಳನ್ನು ಕೈ ಬಿಟ್ಟು ಸರ್ಕಾರ ಮತ್ತು ರಾಜಕೀಯ ಧುರೀಣರು ಸಾಮಾಜಿಕ ಸಾಮರಸ್ಯ ಸ್ಥಾಪಿಸಲು ಶ್ರಮಿಸಬೇಕು" ಎಂದು ಕರೆ ನೀಡಿದ್ದಾರೆ. ಪೌರತ್ವ ತಿದ್ದುಪಡಿ ಕಾಯ್ದೆಗೆ ದೇಶದ ಹಲವು ರಾಜ್ಯಗಳಲ್ಲಿ ವಿರೋಧ ವ್ಯಕ್ತವಾಗಿದೆ. ಕರ್ನಾಟಕದಲ್ಲಿಯೂ ಕಾಯ್ದೆ ವಿರೋಧಿಸಿ ಪ್ರತಿಭಟನೆಗಳು ನಡೆದಿದ್ದವು. ಮಂಗಳೂರಿನಲ್ಲಿ ಪ್ರತಿಭಟನೆ ವೇಳೆ ಹಿಂಸಾಚಾರ ನಡೆದು ಗೋಲಿಬಾರ್‌ನಲ್ಲಿ ಇಬ್ಬರು ಮೃತಪಟ್ಟಿದ್ದರು.