ದೇಶಾದ್ಯಂತ ಮಾರ್ಚ್ 31ರವರೆಗೆ ರೈಲು ಸಂಚಾರ ಬಂದ್...!
ಕರೋನಾ ವೈರಸ್ ಸಾಂಕ್ರಾಮಿಕ ರೋಗವನ್ನು ತಡೆಗಟ್ಟುವ ಹಿನ್ನೆಲೆಯಲ್ಲಿ ಅಭೂತಪೂರ್ವ ಕ್ರಮ ತೆಗೆದುಕೊಂಡಿರುವ ಇಂಡಿಯನ್ ರೈಲ್ವೆ, ತನ್ನ ಎಲ್ಲ ಪ್ರಯಾಣಿಕರ ರೈಲು ಸೇವೆಯನ್ನು ಮಾರ್ಚ್ 22ರ ಮಧ್ಯರಾತ್ರಿಯಿಂದ ಮಾರ್ಚ್ 31ರ ಮಧ್ಯರಾತ್ರಿಯವರೆಗೆ ಸ್ಥಗಿತಗೊಳಿಸಲಾಗುವುದು ಹಾಗು ಈ ಅವಧಿಯಲ್ಲಿ ಸರಕು ರೈಲುಗಳು, ಅಂದರೆ ಗೂಡ್ಸ್ ರೈಲುಗಳು ಮಾತ್ರ ಓಡುತ್ತವೆ ಎಂದು ಪ್ರಕಟಿಸಿದೆ.
ಈಗಾಗಲೇ ಮಾರ್ಚ್ 22 ಭಾನುವಾರದಂದು ಪ್ರಧಾನಿ ನರೇಂದ್ರ ಮೋದಿ ಅವರ ಮನವಿಯ ಮೇರೆಗೆ ಜನತಾ ಕರ್ಫ್ಯೂ ಜಾರಿಗೊಂಡಿದ್ದು, ಎಲ್ಲಾ ರೈಲುಗಳನ್ನು ಭಾನುವಾರದ ಮಟ್ಟಿಗೆ ಸ್ಥಗಿತಗೊಳಿಸಲಾಗಿತ್ತು. ಇದೀಗ ರೈಲ್ವೆ ಹೊರಡಿಸಿದ ಹೊಸ ಆದೇಶದ ಪ್ರಕಾರ ಸರಕು ರೈಲುಗಳನ್ನು ಹೊರತುಪಡಿಸಿ, ಬೇರೆ ಎಲ್ಲ ಪ್ರಯಾಣಿಕರ ರೈಲುಗಳನ್ನು ಮಾರ್ಚ್ 22ರಿಂದ ಮಾರ್ಚ್ 31ರವರೆಗೆ ರದ್ದು ಮಾಡಲಾಗಿದೆ.
ಈಗಾಗಲೇ ಮಾರ್ಚ್ 21ರ ಒಳಗೆ ರೈಲು ಟಿಕೆಟನ್ನು ಮುಂಚಿತವಾಗಿಯೇ ಬುಕ್ ಮಾಡಿರುವ ಪ್ರಯಾಣಿಕರಿಗೆ ಅನುಕೂಲವಾಗುವಂತೆ ಎಲ್ಲಾ ರದ್ದಾದ ರೈಲುಗಳ ಪ್ರಯಾಣಿಕರಿಗೆ ಅವರ ಪೂರ್ತಿ ಹಣವನ್ನು ಮರುಪಾವತಿಸಲಾಗುವುದು ಎಂದು ರೈಲ್ವೆ ಪ್ರಕಟಿಸಿದೆ.