ಗೋಸೇವೆಗೆ ಮುಂದಾದ ದರ್ಶನ್-ಯಶ್ !

 

ಜಿಲ್ಲೆಯಲ್ಲಿ ಮತ್ತೆ ಜೋಡೆತ್ತುಗಳ ಸುದ್ದಿ ಸದ್ದು ಮಾಡಿದ್ದು, ರಾಜಕೀಯವಾಗಿ ಅಲ್ಲದೆ  ಚಾಲೆಂಜಿಂಗ್ ಸ್ಟಾರ್ ದರ್ಶನ್ ಮತ್ತು ರಾಕಿಂಗ್ ಸ್ಟಾರ್ ಗೋಮಾತೆ ಸೇವೆಗೆ ಸಿದ್ಧರಾಗಿದ್ದಾರೆ.

ನಟ ದರ್ಶನ್ ಕಳೆದ ದಿನ ಚೈತ್ರ ಗೋಶಾಲೆಗೆ ಸುಮಾರು 15 ಟ್ರ್ಯಾಕ್ಟರ್ ಭತ್ತದ ಹುಲ್ಲನ್ನು ಅನುದಾನ ಮಾಡಿದ್ದರು. ಇದೀಗ ನಟ ಯಶ್ ಕೂಡ ಚೈತ್ರ ಗೋಶಾಲೆಗೆ ಸಹಾಯ ಮಾಡುತ್ತಿದ್ದಾರೆ. ಈ ಮೂಲಕ ಮಂಡ್ಯದ ಚೈತ್ರ ಗೋಶಾಲೆಗೆ ದರ್ಶನ್ ಮತ್ತು ಯಶ್ ಬೆಳಕಾಗಿದ್ದಾರೆ.

ಯಶ್ ಪಾಂಡವಪುರದ ತಾಲೂಕಿನ ದೊಡ್ಡಬ್ಯಾಡರಹಳ್ಳಿಯಲ್ಲಿರುವ ಚೈತ್ರ ಗೋಶಾಲೆಯ ಕಟ್ಟಡ ನಿರ್ಮಾಣ ಕೆಲಸದ ಜವಾಬ್ದಾರಿ ಹೊಂದಿಕೊಂಡಿದ್ದರು. ಕೊಟ್ಟ ಮಾತಿನಂತೆ ಕಟ್ಟಡ ಮೇಲ್ಛಾವಣಿ ನಿರ್ಮಾಣದ ಕೆಲಸವನ್ನು ಯಶ್ ತಂಡ ಆರಂಭಿಸಿದೆ. ಯಶ್ ನಂತರ ಗೋಶಾಲೆಯ ಸಹಾಯಕ್ಕೆ ದರ್ಶನ್ ಮುಂದಾಗಿದ್ದು, ಗೋಶಾಲೆಗೆ ಭೇಟಿಕೊಟ್ಟು ಹಸುಗಳಿಗೆ ಹುಲ್ಲು ತರಿಸಿಕೊಟ್ಟಿದ್ದರು.
ಚೈತ್ರ ಗೋ ಶಾಲೆಗೆ 15 ಟ್ರಾಕ್ಟರ್ ಭತ್ತದ ಹುಲ್ಲನ್ನು ದರ್ಶನ್ ನೀಡಿದ್ದರು. ಈ ವಿಡಿಯೋವನ್ನು ಅಭಿಮಾನಿಗಳು ಸೋಶಿಯಲ್ ಮೀಡಿಯಾದಲ್ಲಿ ಅಪ್ಲೋಡ್ ಮಾಡಿದ್ದು, ಇದೀಗ ವಿಡಿಯೋ ಹರಿದಾಡುತ್ತಿದೆ.

ಬೇಸಿಗೆ ಕಾಲ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಜಾನುವಾರುಗಳಿಗೆ ಮೇವಿನ ಅಭಾವ ಉಂಟಾಗುವುದು ಸಹಜವಾಗಿದೆ. ಹೀಗಾಗಿ ಗೋ ಶಾಲೆಯಲ್ಲಿರುವ ಸುಮಾರು 50 ದನಗಳಿಗೆ ಯಾವುದೇ ರೀತಿಯ ಮೇವಿನ ಅಭಾವ ಉಂಟಾಗಬಾರದು ಎಂದು ದರ್ಶನ್ 15 ಟ್ರ್ಯಾಕ್ಟರ್ ಹುಲ್ಲನ್ನು ಖರೀದಿ ಮಾಡಿ, ಈ ಗೋ ಶಾಲೆಗೆ ನೀಡಿದ್ದಾರೆ. ಈ ಹಿಂದೆಯೂ ಸಹ ದರ್ಶನ್ ಸಾಕಷ್ಟು ಗೋಶಾಲೆಗಳಿಗೆ ಇದೇ ರೀತಿ ಮೇವು ಹಾಗೂ ಧನ ಸಹಾಯ ಎರಡನ್ನು ಮಾಡಿದ್ದರು.

ಸದ್ಯ ಮೂಕ ಪ್ರಾಣಿಗಳ ಸಹಾಯಕ್ಕೆ ನಿಂತಿರುವ ಮೂಲಕ ಜೋಡೆತ್ತುಗಳು ಸದ್ದು ಮಾಡಿದ್ದಾರೆ. ಈ ಹಿಂದೆ ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಸುಮಲತಾ ಅಂಬರೀಶ್ ಪರ ಪ್ರಚಾರ ನಡೆಸಿ ಸಾಕಷ್ಟು ಸುದ್ದಿಯಾಗಿದ್ದರು.