ನ್ಯಾಯಾಂಗದ ಮೌಲ್ಯಗಳ ಜೊತೆ ರಾಜಿ ಮಾಡಿಕೊಂಡ್ರಾ ರಂಜನ್ ಗೊಗೊಯಿ...?
ಇಂದು ಸುಪ್ರೀಂ ಕೋರ್ಟ್ ನ ಮಾಜಿ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯಿ ರಾಜ್ಯಸಭಾ ಸದಸ್ಯರಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಇದು ಸದ್ಯ ನ್ಯಾಯಾಂಗ ಹಾಗೂ ರಾಜಕೀಯ ವಲಯದಲ್ಲಿ ಪರ - ವಿರೋಧ ಚರ್ಚೆ ಹುಟ್ಟುಹಾಕಿದೆ. ಈ ಕುರಿತು ಒಂದು ಲೇಖನ...
ಭಾರತದಂತ ಪ್ರಜಾಪ್ರಭುತ್ವ ದೇಶದಲ್ಲಿ ಸಂವಿಧಾನದ ಆಶಗಳನ್ನು ಈಡೇರಿಸಲು ಶಾಸಕಾಂಗ, ಕಾರ್ಯಾಂಗ ಹಾಗೂ ನ್ಯಾಯಾಂಗ ಎಂಬ ಮೂರು ಅಂಗಗಳನ್ನು ಸೃಷ್ಟಿಸಲಾಯಿತು. ಯಾವುದಾದರು ಒಂದು ಅಂಗಕ್ಕೆ ಪೂರ್ಣ ಅಧಿಕಾರ ನೀಡಿದರೆ ಅಧಿಕಾರಾದ ದುರ್ಬಳಕೆ ಆಗುವ ಸಾಧ್ಯತೆಯನ್ನು ಮನಗಂಡಿದ್ದ ನಮ್ಮ ಸಂವಿಧಾನ ನಿರ್ಮಾತೃರು ಮೂರು ಅಂಗಗಳ ನಡುವೆ ಅಧಿಕಾರವನ್ನು ಸ್ಪಷ್ಟವಾಗಿ ಪ್ರತ್ಯೇಕಿಸಿದ್ದರು. ಆದರೆ ದಿನ ಕಳೆದಂತೆ ಶಾಸಕಾಂಗ ಹಾಗೂ ಕಾರ್ಯಾಂಗ ದ ಮೇಲಿನ ನಂಬಿಕೆಯನ್ನು ಕಳೆದುಕೊಂಡ ಶ್ರೀ ಸಾಮಾನ್ಯ ತನ್ನ ಹಕ್ಕುಗಳ ರಕ್ಷಣೆಗಾಗಿ ಹಾಗೂ ನ್ಯಾಯಕ್ಕಾಗಿ ನೆಚ್ಚಿಕೊಂಡಿದ್ದು ನ್ಯಾಯಾಂಗವನ್ನು...
ಭಾರತದ ಬಡ ಕೂಲಿ ಕಾರ್ಮಿಕನಿಂದ ಹಿಡಿದು ಆಗರ್ಭ ಶ್ರೀಮಂತನವರೆಗೂ ಎಲ್ಲರಿಗೂ ನ್ಯಾಯಾಂಗದ ಮೇಲೆ, ನ್ಯಾಯಮೂರ್ತಿಗಳ ಮೇಲೆ ಅಪಾರ ನಂಬಿಕೆ. ನ್ಯಾಯವನ್ನು ಪಡೆಯುವ ಕಟ್ಟ ಕಡೆಯ ತಾಣವಾಗಿ ಜನರು ಇಂದು ನ್ಯಾಯಾಲಯಗಳನ್ನು ನಂಬಿದ್ದು, ಇಂದಿಗೂ ನ್ಯಾಯಾಲಯದ ಮೇಲೆ ಅಪಾರ ಗೌರವವನ್ನು ಹೊಂದಿದ್ದಾರೆ. ಶಾಸಾಕಾಂಗ ಹಾಗೂ ಕಾರ್ಯಂಗಗಳು ಭ್ರಷ್ಟತೆಗೆ ಒಳಗಾಗಿದ್ದರು ನಮ್ಮ ದೇಶದಲ್ಲಿ ನ್ಯಾಯಾಂಗ ಮಾತ್ರ ಇನ್ನು ಜನರ ವಿಶ್ವಾಸ ಕಳೆದುಕೊಂಡಿಲ್ಲ.
ಆದರೆ ಇಂದು ನಡೆದ ಬೆಳವಣಿಗೆಯೊಂದು ಜನರು ನ್ಯಾಯಾಂಗದ ಮೇಲೆ ಇಟ್ಟಿದ್ದ ನಂಬಿಕೆಯ ಬುನಾದಿಯನ್ನೇ ಅಲುಗಾಡಿಸಿದೆ. ತನ್ನ ಐತಿಹಾಸಿಕ ತೀರ್ಪುಗಳಿಂದ ನ್ಯಾಯಾಂಗ ವ್ಯವಸ್ಥೇಯಲ್ಲಿ ಹೊಸ ಸಂಚಲನ ಸೃಷ್ಟಿಸಿದ್ದ, ಶೀಘ್ರ ನ್ಯಾಯದಾನ ಪ್ರಕ್ರಿಯೆಗಳಿಂದ ದೇಶದ ಜನರಲ್ಲಿ ನ್ಯಾಯಾಲಯದ ಕುರಿತು ಹೊಸ ಆಶಾಕಿರಣ ಮೂಡಿಸಿದ್ದ ಅದೇ ವ್ಯಕ್ತಿ , ಇಂದು ಅಧಿಕಾರದ ಆಸೆಗೆ ನ್ಯಾಯಾಂಗದ ಮೌಲ್ಯಗಳನ್ನು ಗಾಳಿಗೆ ತೂರಿದ್ದಾರೆ.
ಹೌದು, ಭಾರತದ 46 ನೇ ಮುಖ್ಯ ನ್ಯಾಯಮೂರ್ತಿಯಾಗಿದ್ದ ರಂಜನ್ ಗೊಗೊಯಿ ಯನ್ನು ರಾಷ್ಟಪತಿ ರಾಮನಾಥ ಕೊವೀಂದ್ ರಾಜ್ಯಸಭೆಗೆ ನಾಮ ನಿರ್ದೇಶನ ಮಾಡಿದ್ದು ಗೊಗೊಯಿ ಇಂದು ಪ್ರಮಾಣ ವಚನ ಸ್ವೀಕರಿಸಿದ್ದಾರೆ.
ಆದರೆ ಸುಪ್ರೀಂ ಕೋರ್ಟ್ ನ ನಿವೃತ ನ್ಯಾಯಮೂರ್ತಿಯೋಬ್ಬರನ್ನು ನಿವೃತ್ತಿಯ ಬಳಿಕ ಕೇವಲ ಮೂರು ತಿಂಗಳ ಅವಧಿಯಲ್ಲಿ ರಾಜ್ಯಸಭೆಗೆ ಆಯ್ಕೆ ಮಾಡಿರುವುದು ನ್ಯಾಯಾಂಗ ವ್ಯವಸ್ಥೆಯ ಮೇಲೆ ಅನುಮಾನ ಹುಟ್ಟು ಹಾಕಿದೆ.
" ನಿವೃತ್ತಿಯ ಬಳಿಕ ನ್ಯಾಯಾಧೀಶರಿಗೆ ಹುದ್ದೆ ನೀಡುವುದು ನ್ಯಾಯಾಂಗದ ಸ್ವಾತಂತ್ರ್ಯದ ಮೇಲಿನ ಗಾಯದಂತೆ" ಎಂದು 2018 ರಲ್ಲಿ ಪಂಚಪೀಠದ ಮುಖ್ಯಸ್ಥರಾಗಿದ್ದ ಗೊಗೊಯಿ ಹೇಳಿಕೆ ನೀಡಿದ್ದರು.ಆದರೆ ಅದೇ ಗೊಗೊಯಿ ಇಂದು ನಿವೃತ್ತಿಯ ಬಳಿಕ ನೀಡಿರುವ ಹುದ್ದೆಯನ್ನು ಒಪ್ಪಿಕೊಳ್ಳುವ ಮೂಲಕ ಈ ಮೊದಲು ತಾವೇ ನೀಡಿದ್ದ ಹೇಳಿಕೆಗೆ ತದ್ವಿರುದ್ಧವಾಗಿ ನಡೆದುಕೊಂಡಿದ್ದಾರೆ.
ಅದೇನೇ ಇರಲಿ ಇಂದಿನ ಬೆಳವಣಿಗೆ ನ್ಯಾಯಾಂಗದ ಮೇಲೆ ಜನರು ಇಟ್ಟಿದ್ದ ನಂಬಿಕೆಗಳ ಮೇಲೆ ದೊಡ್ಡ ಹೊಡೆತ ಎಂದೇ ಹೇಳಬಹುದು. ಇನ್ನು ಮುಂದಾದರು ನ್ಯಾಯಮೂರ್ತಿ ಅಂತಹ ಜವಬ್ದಾರಿ ಸ್ಥಾನಗಳನ್ನು ಅಲಂಕರಿಸಿರುವವರು ತಮ್ಮ ಹುದ್ದೆಯ ಘನತೆಯನ್ನು ಅರಿತು ನ್ಯಾಯಾಂಗದ ಮೌಲ್ಯಗಳಿಗೆ ಧಕ್ಕೆಯಾಗದಂತೆ ನಡೆದುಕೊಳ್ಳಬೇಕಿದೆ.