ಅರಣ್ಯ ಬೆಳೆಸುವುದರಲ್ಲಿ ದೇಶದಲ್ಲೇ ಕರ್ನಾಟಕ ಪ್ರಥಮ

ಕರ್ನಾಟಕ ಅರಣ್ಯ ಇಲಾಖೆ ಬಗ್ಗೆ ಅರಣ್ಯ ಸಚಿವನಾಗಿ ನನಗೆ ಬಹಳ ಹೆಮ್ಮೆ ಇದೆ. ಇಡೀ ದೇಶದಲ್ಲೇ ನಮ್ಮ ರಾಜ್ಯವು ಅರಣ್ಯ ಬೆಳೆಸುವುದರಲ್ಲಿ ಪ್ರಥಮ ಸ್ಥಾನದಲ್ಲಿದೆ ಎಂದು ಅರಣ್ಯ ಸಚಿವ ಸಿ.ಸಿ.ಪಾಟೀಲ್ ಹೇಳಿದರು.

ನಂದಿಯ ಡಿಸ್ಕವರಿ ವಿಲೇಜ್‌ನಲ್ಲಿ ಶುಕ್ರವಾರ ನಡೆದ 6ನೇ ಕರ್ನಾಟಕ ಹಕ್ಕಿ ಹಬ್ಬ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. ರಾಜ್ಯದ ಅರಣ್ಯ ಇಲಾಖೆ ಅರಣ್ಯ ಸಂರಕ್ಷಣೆಗೆ ವಿಶೇಷ ಒತ್ತು ನೀಡುತ್ತಿದ್ದು, ಇಲಾಖೆ ಅಧಿಕಾರಿಗಳೂ ಕೂಡ ಹೆಚ್ಚು ಶ್ರಮ ವಹಿಸುವ ಮೂಲಕ ಅರಣ್ಯವನ್ನು ರಕ್ಷಣೆ ಮಾಡುತ್ತಿದ್ದಾರೆ. ಆದ್ದರಿಂದ ಇಂದು ಕರ್ನಾಟಕ ದೇಶದಲ್ಲಿ ಪ್ರಥಮ ಸ್ಥಾನದಲ್ಲಿದೆ ಎಂದರು.

ರಾಜ್ಯದಲ್ಲಿ ಪಕ್ಷಿಗಳ ಸಂಸತಿ ಹೆಚ್ಚಿಸುವ ಉದ್ದೇಶದಿಂದ 1.60 ಕೋಟಿ ರು. ಬೆಲೆಯ ಎರೇಬೂತ್ ಅನ್ನುವ ಪಕ್ಷಿಯನ್ನು ವಿದೇಶದಿಂದ ಆಮದು ಮಾಡಿಕೊಳ್ಳಲಾಗುತ್ತಿದೆ. ಅಲ್ಲದೆ ಕ್ಷೀಣಿಸುತ್ತಿರುವ ರಣಹದ್ದುಗಳ ಸಂತತಿಯನ್ನು ಹೆಚ್ಚಳ ಮಾಡಲಿದ್ದು, 1.30 ಕೋಟಿ ಲಕ್ಷ ರೂ. ಖರ್ಚು ಮಾಡಲಾಗುತ್ತಿದೆ. ಇನ್ನೂ ಹಲವು ಕ್ರಮಗಳನ್ನು ಇಲಾಖೆ ಕೈಗೊಂಡಿದೆ ಎಂದು ಸಚಿವರು ಮಾಹಿತಿ ನೀಡಿದರು.
ನನ್ನ ಸ್ವಕ್ಷೇತ್ರ ಗದಗ ಜಿಲ್ಲೆಯಲ್ಲಿ ಒಂದು ಕೆರೆ ಇದೆ. ಇಲ್ಲಿಗೆ ಅಮೆರಿಕ, ಫ್ರಾನ್ಸ್ ಸೇರಿದಂತೆ ಜಗತ್ತಿನ ವಿವಿಧ ಪ್ರಬೇಧದ ಹಕ್ಕಿಗಳು ಬರುತ್ತವೆ. ಅಲ್ಲಿನ ಗ್ರಾಮದ ಜನರೂ ಕೂಡ ಆ ಹಕ್ಕಿಗಳು ಬರುವ ಕಾಲಕ್ಕೆ ಕೆರೆಯನ್ನು ಸ್ವಚ್ಛ ಮಾಡಿ, ಗ್ರಾಮದ ಜನ ಆ ವಿದೇಶಿ ಹಕ್ಕಿಗಳನ್ನು ಅದ್ಧೂರಿಯಾಗಿ ಸ್ವಾಗತ ಮಾಡುವ ಸಂಪ್ರದಾಯ ಇದೆ ಎಂದು ಅರಣ್ಯ ಸಚಿವ ಪಾಟೀಲ್‌ ವಿವರಿಸಿದರು.