ನಡುರಾತ್ರಿಯಲ್ಲಿ ಭೂಗತ ಪಾತಕಿ ರವಿ ಪೂಜಾರಿ ಬೆಂಗಳೂರಿಗೆ ಕರೆತಂದ ಪೊಲೀಸರು

ಬೆಂಗಳೂರು: ಭೂಗತ ಪಾತಕಿ ರವಿ ಪೂಜಾರಿಯನ್ನು ಪಶ್ಚಿಮ ಆಫ್ರಿಕಾದ ಸೆನೆಗಲ್‌ ದೇಶದಿಂದ  ಭಾನುವಾರ ಮಧ್ಯರಾತ್ರಿ ಬೆಂಗಳೂರಿಗೆ ಕರೆತರಲಾಗಿದೆ.

ರಾತ್ರಿ 12.40ರ ಸುಮಾರಿಗೆ ಆತನನ್ನು ಬೆಂಗಳೂರಿಗೆ ಕರೆತರಲಾಗಿದ್ದು, ಮಡಿವಾಳ ಪೊಲೀಸ್ ಠಾಣೆಯಲ್ಲಿ ವಿಚಾರಣೆಗೆ ಒಳಪಡಿಸಲಾಗಿದೆ. ಇಂದು ಆತನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗುತ್ತದೆ.

ರಾಜ್ಯದಲ್ಲಿ 60ಕ್ಕೂ ಅಧಿಕ ಪ್ರಕರಣಗಳಲ್ಲಿ ಪೊಲೀಸರಿಗೆ ಬೇಕಾಗಿದ್ದ ರವಿ ಪೂಜಾರಿ, 1990ರಿಂದ ಭಾರತದಿಂದ ಪರಾರಿಯಾಗಿದ್ದ. ದುಬೈ ಸೇರಿದಂತೆ ಅನೇಕ ದೇಶಗಳಲ್ಲಿ ತಲೆ ಮರೆಸಿಕೊಂಡು ಓಡಾಡುತ್ತಿದ್ದ. ರವಿ ಪೂಜಾರಿ ವಿರುದ್ಧ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ  39ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿವೆ.  ಬೆಂಗಳೂರಿನಲ್ಲಿ ಕೂಡ ಆತನ ಮೇಲೆ ಸುಮಾರು 38 ಪ್ರಕರಣಗಳಿವೆ. 
 
ಸೆನೆಗಲ್ ದೇಶದ ಜೈಲಿನಲ್ಲಿ ಕಳೆದ ಒಂದೂವರೆ ವರ್ಷದಿಂದ ರವಿ ಪೂಜಾರಿಯನ್ನು ಭಾರತದ ಪೊಲೀಸರಿಗೆ ಹಸ್ತಾಂತರ ಮಾಡಿಸಲು ಸತತ ಪ್ರಯತ್ನಗಳು ನಡೆದಿದ್ದವು. ಆದರೆ ಆತನ ಗಡಿಪಾರು ವಿಚಾರದಲ್ಲಿ ಎರಡೂ ದೇಶಗಳ ನಡುವೆ ಒಪ್ಪಂದ ನಡೆಯದ ಕಾರಣ ಹಸ್ತಾಂತರ ವಿಳಂಬವಾಗಿತ್ತು. ಕಳೆದ ವಾರ ಈ ಪ್ರಕ್ರಿಯೆಯ ತೊಡಕುಗಳು ಬಗೆಹರಿದಿದ್ದರಿಂದ ಎರಡು ದಿನಗಳ ಹಿಂದೆಯಷ್ಟೇ ಅಲ್ಲಿನ ನ್ಯಾಯಾಲಯ ಆತನನ್ನು ಬೆಂಗಳೂರು ಪೊಲೀಸರ ವಶಕ್ಕೆ ಒಪ್ಪಿಸಿತ್ತು.