ಕರ್ನಾಟಕದ ಧೀಮಂತ ಪತ್ರಕರ್ತ ಪಾಟೀಲ್ ಪುಟ್ಟಪ್ಪ ನವರ ಜೀವನ ಹಾಗೂ ಸಾಧನೆ....
ಪತ್ರಿಕೋದ್ಯಮ, ಸಾಹಿತ್ಯ ರಚನೆ ಮತ್ತು ಕನ್ನಡ ಹೋರಾಟದಲ್ಲಿ ಗಣ್ಯರಾದ ಪಾಟೀಲ ಪುಟ್ಟಪ್ಪನವರು `ಪಾಪು’ ಎಂದೇ ಪ್ರಸಿದ್ಧರಾಗಿದ್ದಾರೆ. ಇವರು ಹಾವೇರಿ ಜಿಲ್ಲೆಯ ಕುರುಬಗೊಂಡ ಗ್ರಾಮದಲ್ಲಿ ಸಿದ್ಧಲಿಂಗಪ್ಪ-ಮಲ್ಲಮ್ಮ ದಂಪತಿಗಳಿಗೆ ೧೪-೧-೧೯೨೨ರಲ್ಲಿ ಜನಿಸಿದರು. ಶಾಲಾ ಶಿಕ್ಷಣವನ್ನು ಹಲಗೇರಿ, ಬ್ಯಾಡಗಿ, ಚಿತ್ರದುರ್ಗ, ಹಾವೇರಿಗಳಲ್ಲಿ ಮುಗಿಸಿ ಧಾರವಾಡದ ಕರ್ನಾಟಕ ಕಾಲೇಜಿನಲ್ಲಿ ಪದವಿ ಪೂರೈಸಿ ಬೆಳಗಾವಿ ಲಿಂಗರಾಜ ಕಾಲೇಜಿನಲ್ಲಿ ಎಂ.ಎಂ.ಬಿ. ವ್ಯಾಸಂಗ ಮಾಡಿದರು. ೧೯೪೯ರಲ್ಲಿ ಕ್ಯಾಲಿಪೋರ್ನಿಯಾ ವಿಶ್ವವಿದ್ಯಾಲಯದಿಂದ ಪತ್ರಿಕೋದ್ಯಮದಲ್ಲಿ ಎಂ.ಎಫ್.ಪಿ ಪದವಿ ಗಳಿಸಿದರು.
ವಿಶಾಲ ಕರ್ನಾಟಕ ಪತ್ರಿಕೆ ಸಂಪಾದಕರಾಗಿ ಕೆಲಸಮಾಡಿದ ಪುಟ್ಟಪ್ಪನವರು ಕ್ಯಾಲಿಫೋರ್ನಿಯಾಗೆ ಹೋಗಿ ಬಂದ ಮೇಲೆ ನವಯುಗ ಮಾಸಪತ್ರಿಕೆ ಸಂಪಾದಕರಾದರು. ಆಮೇಲೆ ೧೯೫೪ರಲ್ಲಿ ಪ್ರಪಂಚ ವಾರಪತ್ರಿಕೆಯನ್ನು ತಾವೇ ಹುಟ್ಟು ಹಾಕಿದರು. ೧೯೫೭ರಲ್ಲಿ ಸಂಗಮ ಎಂಬ ಕನ್ನಡ ಡೈಜಸ್ಟನ್ನು ಪ್ರಾರಂಭಿಸಿದರು. ೧೯೫೯ರಲ್ಲಿ ವಿಶ್ವವಾಣಿ ದಿನಪತ್ರಿಕೆಯನ್ನೂ ಮನೋರಮಾ ಎಂಬ ಚಲನಚಿತ್ರ ಮಾಸಿಕವನ್ನೂ ಆರಂಭಿಸಿದರು. ಹೀಗೆ ಪತ್ರಿಕೆಗಳನ್ನು ಹುಟ್ಟು ಹಾಕುತ್ತಲೂ ನಡೆಸುತ್ತಲೂ ಪತ್ರಿಕೋದ್ಯಮದಲ್ಲಿ ಹೊಸ ಹೊಸ ಪ್ರಯೋಗಗಳನ್ನು ಮಾಡಿದರು. ಇದರ ಜೊತೆಗೆ ಪ್ರಜಾವಾಣಿ ಪತ್ರಿಕೆಯಲ್ಲಿ, ಅನಂತರ ಕನ್ನಡಪ್ರಭ ಪತ್ರಿಕೆಯಲ್ಲಿ ಅಂಕಣಕಾರರಾಗಿ ಮಿಂಚಿದರು. ಹೀಗೆ ಪತ್ರಿಕಾ ಸಂಪಾದಕರಾಗಿ ನಾಡಿನ ಮನೆಮಾತಾದರು. ಇದಲ್ಲದೆ ಇತರ ಸಂಸ್ಥೆಗಳಲ್ಲಿ ಸಾರ್ವಜನಿಕ ರಂಗಗಳಲ್ಲಿ ದುಡಿದಿದ್ದಾರೆ. ಕರ್ನಾಟಕ ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯರಾಗಿದ್ದರು. ರಾಜ್ಯ ಸಭೆಯ ಸದಸ್ಯರಾಗಿ (೧೯೬೨-೭೧) ಧಾರವಾಡ ಮತ್ತು ಕರ್ನಾಟಕದ ಸಮಸ್ಯೆಗಳಿಗೆ ಧ್ವನಿಯಾದರು. ಕರ್ನಾಟಕ ವಿದ್ಯಾವರ್ಧಕ ಸಂಘಕ್ಕೆ ೧೯೬೭ ರಿಂದ ಅಧ್ಯಕ್ಷರಾಗಿದ್ದಾರೆ. ಗೋಕಾಕ ವರದಿ ಜಾರಿಗೆ ಬರಲು ನಡೆದ ಚಳುವಳಿಯ ನೇತೃತ್ವ ವಹಿಸಿದ್ದರು. ಕರ್ನಾಟಕ ಸರಕಾರ ಕನ್ನಡ ಕಾವಲು ಮತ್ತು ಗಡಿಸಲಹಾ ಸಮಿತಿ ರಚಿಸಿ ಇವರನ್ನು ಅದಕ್ಕೆ ಅಧ್ಯಕ್ಷರನ್ನಾಗಿ ಮಾಡಿದಾಗ ಕನ್ನಡ ಅನುಷ್ಠಾನಕ್ಕೆ ಇವರು ಶ್ರಮಿಸಿದರು. ೧೯೯೨ರಲ್ಲಿ ಅಖಿಲ ಕರ್ನಾಟಕ ಹೋರಾಟ ಸಂಘಗಳ ಒಕ್ಕೂಟದ ಅಧ್ಯಕ್ಷರಾಗಿದ್ದರು. ಹೀಗೆ ನಾನಾ ರಂಗಗಳಲ್ಲಿ ಸೇವೆ ಸಲ್ಲಿಸಿರುವ ಇವರಿಗೆ ಹಲವಾರು ಪ್ರಶಸ್ತಿ ಗೌರವಗಳು ಸಂದಿವೆ.
ಕರ್ನಾಟಕ ವಿಶ್ವವಿದ್ಯಾಲಯ ಇವರಿಗೆ ೧೯೯೪ರಲ್ಲಿ ಡಿ’ಲಿಟ್’ ಪದವಿ ಕೊಟ್ಟಿದೆ. ಕರ್ನಾಟಕ ಸರಕಾರ ನೀಡುವ ಟಿ.ಎಸ್.ಆರ್.ಪ್ರಶಸ್ತಿ ಇವರಿಗೆ ೧೯೯೪ರಲ್ಲಿ ಲಭಿಸಿದೆ. ೧೯೭೬ರಲ್ಲಿ ರಾಜ್ಯ ಪ್ರಶಸ್ತಿ, ೧೯೯0 ವಿಶ್ವೇಶ್ವರಯ್ಯ ಭಾರತ ಜ್ಯೋತಿ ಪ್ರಶಸ್ತಿ, ೧೯೯೯ರಲ್ಲಿ ಹುಬ್ಬಳ್ಳಿಯ ತಿಲಕ್ ಮೊಹರೆ ಪ್ರಶಸ್ತಿ, ೧೯೯೬ರಲ್ಲಿ ಹಂಪಿ ವಿಶ್ವವಿದ್ಯಾಲದ ನಾಡೋಜ ಗೌರವ, ೨00೧ರಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಸದಸ್ಯತ್ವ, ೨00೨ರಲ್ಲಿ ಶಾಂತವೇರಿ ಗೋಪಾಲಗೌಡ ಪ್ರಶಸ್ತಿ, ‘ಕನ್ನಡ ಸಾಹಿತ್ಯ ಪರಿಷತ್ತಿನ ‘ನೃಪತುಂಗ’ ಪ್ರಶಸ್ತಿ ಇತ್ಯಾದಿ ಲಭಿಸಿವೆ. ಬೆಳಗಾವಿಯಲ್ಲಿ ನಡೆದ ೭0ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಗೌರವ ೨00೩ರಲ್ಲಿ ದೊರೆಕಿತು.
ಪಾಟೀಲ ಪುಟ್ಟಪ್ಪನವರು ಕೇವಲ ಪತ್ರಕರ್ತರಲ್ಲ ಗ್ರಂಥಕರ್ತರೂ ಹೌದು. ಅವರು ಬರೆದ ಗ್ರಂಥಗಳಲ್ಲಿ ಕೆಲವು ಹೀಗಿವೆ:
ನನ್ನದು ಈ ಕನ್ನಡ ನಾಡು(೧೯೭೫), ನಮ್ಮದು ಈ ಭರತಭೂಮಿ(೧೯೭೭), ಕರ್ನಾಟಕ ಕಥೆ(೧೯೯೧), ಸೋವಿಯತ್ ದೇಶ ಕಂಡೆ(೧೯೪೪), ಗವಾಕ್ಷಿ ತೆರೆಯಿತು(೧೯೭೪), ಶಿಲಾಬಾಲಿಕೆ ನುಡಿದಳು(೧೯೭೪), ನಮ್ಮ ದೇಶ ನಮ್ಮ ಜನ(೧೯೭೩), ಈಗ ಹೊಸದನ್ನು ಕಟ್ಟೋಣ(೧೯೭೫), ಪಾಪು ಪ್ರಪಂಚ(೨000).