'ಜನಪದ ನಾಯಕ ಡಾ.ರಾಜ್ ಕುಮಾರ್' ಪುಸ್ತಕ: ಬಿಡುಗಡೆ ಮಾಡಿದ ಪವರ್ ಸ್ಟಾರ್..!
ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಮುಖ್ಯ ಅತಿಥಿಯಾಗಿ ಆಗಮಿಸಿದ್ದ 'ಲೋಕಲ್ ಟ್ರೈನ್' ಆಡಿಯೋ ಲಾಂಚ್ ಕಾರ್ಯಕ್ರಮದಲ್ಲಿ, ಬಂಡಾಯ ಸಾಹಿತಿ, ಚಲನಚಿತ್ರ ನಿರ್ದೇಶಕ ಬರಗೂರು ರಾಮಚಂದ್ರಪ್ಪ ಅವರು ಬರೆದಿರುವ "ಜನಪದ ನಾಯಕ ಡಾ. ರಾಜ್ ಕುಮಾರ್" ಪುಸ್ತಕ ಬಿಡುಗಡೆ ಮಾಡಿದರು.
ಸಿನಿಮಾದ ಆಡಿಯೋ ಜನವರಿ 23ರಂದು ಎಸ್.ಆರ್.ವಿ ಥಿಯೇಟರ್ ನಲ್ಲಿ ಬಿಡುಗಡೆಯಾಗಿದ್ದು, ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಆಡಿಯೋ ಲಾಂಚ್ ಮಾಡಿದ ಬಳಿಕ, ತಮ್ಮ ತಂದೆಯವರಾದ ಡಾ.ರಾಜ್ ಕುಮಾರ್ ಬಗ್ಗೆ ಬರೆದಿರುವ "ಜನಪದ ನಾಯಕ ಡಾ.ರಾಜ್ ಕುಮಾರ್" ಪುಸ್ತಕವನ್ನು ವೇದಿಕೆಯ ಮೇಲೆ ಬಿಡುಗಡೆ ಮಾಡಿದರು. ನಂತರ ಲೋಕಲ್ ಟ್ರೈನ್ ಚಿತ್ರತಂಡವು ಪುನೀತ್ ರಾಜ್ ಕುಮಾರ್ ಅವರಿಗೆ ಉಡುಗೊರೆ ನೀಡಿ ಸನ್ಮಾನ ಮಾಡುವ ಮೂಲಕ ಗೌರವಿಸಿದರು.
ಬರಗೂರು ರಾಮಚಂದ್ರಪ್ಪ ಅವರು ಬರೆದಿರುವ ಈ ಪುಸ್ತಕವು ಡಾ.ರಾಜ್ಕುಮಾರ್ ಅವರ ಜೀವನಯಾನ, ವ್ಯಕ್ತಿತ್ವ, ಸಿನಿಮಾ ಬಗೆಗಿನ ಪ್ರೀತಿ, ಶ್ರದ್ಧೆ, ಅಭಿಮಾನಿಗಳ ಮೇಲಿರುವ ಕಾಳಜಿ, ಅವರ ಸಾಧನೆ ಹಾಗೂ ಒಟ್ಟಾರೆ ಅವರ ಬದುಕಿನ ಚಿತ್ರಣವನ್ನು ಬಿಂಬಿಸುವ ಪುಸ್ತಕವಾಗಿದೆ. ಈ ಪುಸ್ತಕವನ್ನು ಲೋಕಲ್ ಟ್ರೈನ್ ತಂಡಕ್ಕೆ ಹಾಗೂ ಕಾರ್ಯಕ್ರಮಕ್ಕೆ ಆಗಮಿಸಿದ್ದ ಎಲ್ಲರಿಗೂ ವಿತರಿಸಲಾಯಿತು.
ಇನ್ನು ಆಲ್ಮಾ ನ್ಯೂಸ್ ಜೊತೆ ಮಾತನಾಡಿದ ಚಿತ್ರದ ನಾಯಕ ಡಾರ್ಲಿಂಗ್ ಕೃಷ್ಣ ಅವರು 'ಅಪ್ಪು ಸರ್ ಆಡಿಯೋ ಲಾಂಚ್ ಮಾಡಿದ್ದು ನನಗೆ ತುಂಬಾ ಖುಷಿಯಾಯಿತು, ನಾನು ಮೊದಲು ಇಂಡಸ್ಟ್ರಿಗೆ ಬಂದಿದ್ದೇ ಅಪ್ಪು ಅವರ ಚಿತ್ರದ ಮೂಲಕ, ಮೊದಲು ನಾನು ಅವರ ಫ್ಯಾನ್ ಆಗಿದ್ದೆ, ಅವರನ್ನು ಸ್ಟಾರ್ ತರ ನೋಡುತ್ತಿದ್ದೆ, ಈಗ ಅಪ್ಪು ಸರ್ ನನಗೆ ಬ್ರದರ್ ತರ ಆಗಿಬಿಟ್ಟಿದ್ದಾರೆ. ಸಾಕಷ್ಟು ಸಿನಿಮಾದಲ್ಲಿ ಅವರ ಜೊತೆ ಕೆಲಸ ಮಾಡಿದ್ದೀನಿ. ಮುಂದೆ ಕೂಡ ಮಾಡೋಕೆ ಇಷ್ಟಪಡ್ತೀನಿ. ಅವರ ಜೊತೆ ಕೆಲಸ ಮಾಡುವುದೇ ಒಂದು ಖುಷಿ' ಎಂದು ಅಪ್ಪು ಬಗೆಗಿನ ತಮ್ಮ ಅಭಿಮಾನವನ್ನು ವ್ಯಕ್ತಪಡಿಸಿದ್ದಾರೆ.