ಟಿ20ವಿಶ್ವಕಪ್ ನಲ್ಲಿ ರೊಹಿತ್ ಶರ್ಮಾ ಜೊತೆಗೆ ಇನ್ನಿಂಗ್ಸ್ ಆರಂಭಿಸಲು ಇವರೇ ಸೂಕ್ತ ಆಟಗಾರ..

ಭಾರತ ತಂಡದ ಮಾಜಿ ಆರಂಭಿಕ ಬ್ಯಾಟ್ಸ್‌ಮನ್‌ ಕೃಷ್ಣಮಾಚಾರಿ ಶ್ರೀಕಾಂತ್‌ ಮುಂಬರುವ ಟಿ20 ವಿಶ್ವಕಪ್‌ಗೆ ಭಾರತ ತಂಡದ ಪರ ಇನಿಂಗ್ಸ್‌ ಆರಂಭಿಸಲು 'ಗಬ್ಬರ್‌' ಖ್ಯಾತಿಯ ಎಡಗೈ ಬ್ಯಾಟ್ಸ್‌ಮನ್‌ ಶಿಖರ್‌ ಧವನ್‌ ಅವರಿಗಿಂತಲೂ ಕನ್ನಡಿಗ ಕೆಎಲ್‌ ರಾಹುಲ್‌ ಸೂಕ್ತ ಎಂದು ಅಭಿಪ್ರಾಯ ಪಟ್ಟಿದ್ದಾರೆ.

ಇನ್ನು ಧವನ್‌ ಅನುಪಸ್ಥಿತಿಯಲ್ಲಿ ಭಾರತದ ಪರ ಇನಿಂಗ್ಸ್‌ ಆರಂಭಿಸಿದ್ದ ಕೆಎಲ್‌ ರಾಹುಲ್‌ ಸಿಕ್ಕ ಅವಕಾಶವನ್ನು ಅದ್ಭುತವಾಗಿ ಬಳಸಿಕೊಂಡು ಸ್ಥಿರ ಪ್ರದರ್ಶನದೊಂದಿಗೆ ತಮ್ಮ ಸ್ಥಾನ ಭದ್ರ ಪಡಿಸಿಕೊಳ್ಳುವ ಪ್ರಯತ್ನ ನಡೆಸಿದ್ದಾರೆ. ಇದರೊಂದಿಗೆ ಧವನ್‌ ವೈಫಲ್ಯ ಎದುರಿಸಿದರೆ ತಂಡದಿಂದ ಹೊರ ಬೀಳುವ ಸ್ಥಿತಿ ನಿರ್ಮಾಣವಾಗಿದೆ.

ಸೈಯದ್‌ ಮುಷ್ತಾಕ್‌ ಅಲಿ ಟಿ20 ಟೂರ್ನಿಯಲ್ಲಿ ದಿಲ್ಲಿ ಪರ ಆಡುವ ಸಂದರ್ಭದಲ್ಲಿ ಕಾಲಿಗೆ ಗಾಯ ಮಾಡಿಕೊಂಡಿದ್ದ ಧವನ್‌, ಇದೇ ಕಾರಣಕ್ಕೆ ವೆಸ್ಟ್‌ ಇಂಡೀಸ್‌ ವಿರುದ್ಧ ಕಳೆದ ತಿಂಗಳು ನಡೆದ ಸೀಮಿತ ಓವರ್‌ಗಳ ಕ್ರಿಕೆಟ್‌ ಸರಣಿಗಳಿಂದ ಹೊರಗುಳಿದಿದ್ದರು. ಇದೀಗ ಶ್ರೀಲಂಕಾ ವಿರುದ್ಧದ 3 ಪಂದ್ಯಗಳ ಟಿ20 ಸರಣಿಯಲ್ಲಿ ರೋಹಿತ್‌ ಶರ್ಮಾ ವಿಶ್ರಾಂತಿ ಪಡೆದಿದ್ದು, ಅವರ ಸ್ಥಾನದಲ್ಲಿ ಧವನ್‌ ಮರಳಿ ತಂಡ ಸೇರಿಕೊಂಡಿದ್ದಾರೆ.