ಯಡಿಯೂರಪ್ಪ ಮಾತಿಗೆ ಅಮಿತ್ ಶಾ ಸಿಟ್ಟು: ಸಂಪುಟ ವಿಸ್ತರಣೆಗೆ ಮತ್ತೆ ಕಂಟಕ
ಯಡಿಯೂರಪ್ಪ ಮಾತಿಗೆ ಅಮಿತ್ ಶಾ ಸಿಟ್ಟು:
ಸಂಪುಟ ವಿಸ್ತರಣೆಗೆ ಮತ್ತೆ ಕಂಟಕ
ನೆರೆ ಪರಿಹಾರದ ವಿಷಯದಲ್ಲಿ ಕೇಂದ್ರ ಸರ್ಕಾರ ನೆರವಿಗೆ ಬರಲಿಲ್ಲ' ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಆಡಿದ್ದ ಮಾತಿಗೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ತೀವ್ರ ಅಸಮಾಧಾನಗೊಂಡಿದ್ದಾರೆ. ಇದರಿಂದಾಗಿ ಸಂಪುಟ ವಿಸ್ತರಣೆಗೆ ಮತ್ತೆ ವಿಘ್ನ ಎದುರಾಗಿದೆ.
'ಇದೇ 11 ಮತ್ತು 12 ರಂದು ದೆಹಲಿಗೆ ಹೋಗಲಿದ್ದೇನೆ. ಸಂಪುಟಕ್ಕೆ ಯಾರನ್ನು ಸೇರಿಸಿಕೊಳ್ಳಬೇಕು ಎಂಬ ಬಗ್ಗೆ ರಾಷ್ಟ್ರೀಯ ಅಧ್ಯಕ್ಷರ ಜತೆ ಚರ್ಚಿಸಿ, ಅವರ ಒಪ್ಪಿಗೆ ಪಡೆದು ವಿಸ್ತರಣೆ ಮಾಡಲಿದ್ದೇನೆ' ಎಂದು ಯಡಿಯೂರಪ್ಪನವರೇ ಹೇಳಿದ್ದರು. ಅಮಿತ್ ಶಾ ಅವರು ಭೇಟಿಗೆ ಸಮಯವನ್ನೇ ಕೊಡದಿದ್ದುದರಿಂದ ಯಡಿಯೂರಪ್ಪ ಇಕ್ಕಟ್ಟಿಗೆ ಸಿಲುಕಿದ್ದಾರೆ.
ಇದೇ 15ಕ್ಕೆ ಶೂನ್ಯಮಾಸ ಮುಗಿಯಲಿದ್ದು, ಬಳಿಕ ವಿಸ್ತರಣೆಯಾಗಲಿದೆ ಎಂಬ ನಿರೀಕ್ಷೆ ಆಕಾಂಕ್ಷಿಗಳಲ್ಲಿತ್ತು. ಅಮಿತ್ ಶಾ 18ರಂದು ರಾಜ್ಯಕ್ಕೆ ಬಂದರೂ ಸಂಪುಟ ವಿಸ್ತರಣೆ ಬಗ್ಗೆ ಚರ್ಚಿಸಲು ಸಮಯ ಕೊಡಬೇಕು. ಆ ಬಗ್ಗೆ ಪ್ರಸ್ತಾಪಿಸಲು ಅವಕಾಶವಾಗದೇ ಇದ್ದರೆ ಮತ್ತೆ ದೆಹಲಿಗೆ ಹೋಗಿ ಒಪ್ಪಿಗೆ ಪಡೆದು ಬರುವವರೆಗೂ ವಿಸ್ತರಣೆ ನಡೆಯುವುದು ಕಷ್ಟ' ಎಂದು ಬಿಜೆಪಿ ಮೂಲಗಳು ಹೇಳಿವೆ.
'ಅಮಿತ್ ಶಾ ಅವರು ಭೇಟಿಗೆ ಸಮಯ ಕೊಟ್ಟಿಲ್ಲ. ಹಾಗಾಗಿ ದೆಹಲಿಗೆ ಹೋಗಿಲ್ಲ. ಇದೇ 18ಕ್ಕೆ ರಾಷ್ಟ್ರೀಯ ಅಧ್ಯಕ್ಷರು ರಾಜ್ಯಕ್ಕೆ ಬರಲಿದ್ದು, ಆಗ ಚರ್ಚೆ ಮಾಡುವೆ' ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತಿಳಿಸಿದರು.