ಬಿಜೆಪಿಯವರ ಬಳಿ ಅಧಿಕಾರ ಇದೆ ಏನು ಬೇಕಾದ್ರೂ ಮಾಡಲಿ: ಡಿಕೆ ಶಿವಕುಮಾರ್

ಬಿಜೆಪಿಯವರ ಬಳಿ ಅಧಿಕಾರ ಇದೆ ಏನು ಬೇಕಾದ್ರೂ ಮಾಡಲಿ: ಡಿಕೆ ಶಿವಕುಮಾರ್ 

ಬಿಜೆಪಿ ಅವರ ಬಳಿ ಅಧಿಕಾರ ಇದೆ. ಅವರು ಏನು ಬೇಕಾದರೂ ಮಾಡಲಿ, ಅಶಾಂತಿ ಉಂಟು ಮಾಡಿದರೂ ನಾನೇನು ಮಾತನಾಡಲ್ಲ ಎಂದು ಮಾಜಿ ಸಚಿವ ಡಿಕೆ ಶಿವಕುಮಾರ್ ತಿಳಿಸಿದ್ದಾರೆ.
ಯೇಸು ಪ್ರತಿಮೆ ವಿರುದ್ಧ ಬಿಜೆಪಿ ಹಾಗೂ ಆರ್ ಎಸ್ ಎಸ್ ಕಡೆಯಿಂದ ಕನಕಪುರ ಚಲೋ ಆಯೋಜಿಸಿರುವ ಕುರಿತು ಸೋಮವಾರ ಮಾಧ್ಯಮಗಳ ಜತೆ ಮಾತನಾಡಿದ ಡಿಕೆ ಶಿವಕುಮಾರ್, ‘ಕಲ್ಲಡ್ಕ ಪ್ರಭಾಕರ್ ಭಟ್ ಯಾರು? ನನಗೆ ಅವ್ರು ಯಾರು ಗೊತ್ತಿಲ್ಲ. ನಾನು ಮಾನವ ಜೀವನಕ್ಕೆ ಜಯವಾಗಲಿ. ಮಾನವ ಧರ್ಮದಲ್ಲಿ ನಾನು ನಂಬಿಕೆ ಇಟ್ಟವನು‌’ ಎಂದರು.
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ವಿರೋಧ ಪಕ್ಷ, ಆಡಳಿತ ಪಕ್ಷ ಇರಬೇಕು. ಪರ ವಿರೋಧ ಇರಬೇಕು. ಯಾರು ಬೇಕಾದರೂ ಕನಕಪುರಕ್ಕೆ ಬರಬಹುದು. ಬರುವವರನ್ನು ತಡೆಯುವುದು ನನ್ನ ಧರ್ಮ ಅಲ್ಲ. ಇದು ಬೆಂಗಳೂರು. ಇಡೀ ವಿಶ್ವ ಇಲ್ಲಿ ಏನೇನಾಗುತ್ತಿದೆ ಅಂತಾ ನೋಡ್ತಿದೆ. ಅಮೆರಿಕಾ, ಆಸ್ಟ್ರೇಲಿಯಾದಿಂದ ಫೋನ್ ಮಾಡ್ತಿದ್ದಾರೆ. ನಾನು ಏನು ಮಾತಾಡೊಲ್ಲ. ಅವ್ರ ಹತ್ರ ಅಧಿಕಾರ ಇದೆ. ಅವ್ರು ಏನು ಬೇಕಾದ್ರು ಮಾಡಿಕೊಳ್ಳಲಿ. ನನ್ನ ಕಾರ್ಯಕರ್ತರಿಗೆ ಹೇಳಿದ್ದೇನೆ. ಯಾರು ಏನೇ ಮಾತಾಡಿದ್ರು ಸುಮ್ಮನೆ ಇರಿ.‌ ಎಷ್ಟೇ ಬೈದರು ಸುಮ್ಮನೆ ‌ಇರಿ ಅಂತ ಹೇಳಿದ್ದೇನೆ. ಯಾರು ಗಲಾಟೆ ಮಾಡೋದು ಬೇಡ. ಅವ್ರು ಏನು ಬೇಕೋ ಅದನ್ನ ಮಾಡಿಕೊಂಡು ಹೋಗಲಿ.

ಕನಕಪುರಕ್ಕೆ ಯಾರು ಬೇಕಾದರೂ ಬರಬಹುದು. ಕೇವಲ ಇವರಲ್ಲ ಸಚಿವರುಗಳಾಗಲಿ, ದೊಡ್ಡ ದೊಡ್ಡ ನಾಯಕರಾಗಲಿ ಯಾರು ಬೇಕಾದರೂ ಬರಲಿ ನಾವು ಅವರನ್ನು ಸ್ವಾಗತಿಸುತ್ತೇವೆ. ಅಭಿವೃದ್ಧಿ ಮಾಡುತ್ತೇವೆ ಅಂತಿದ್ದಾರೆ, ಮಾಡಲಿ. ಅವರವರ ಖುಷಿಗೆ ಏನೇನ್ ಬೇಕು ಅದನ್ನ ಮಾಡ್ತಿದ್ದಾರೆ, ಮಾಡ್ಲಿ. ಕನಕಪುರ ಕಸ ಗೂಡಿಸುತ್ತೇವೆ ಅಂದ್ರು. ‌ಕ್ಲೀನ್ ಮಾಡ್ತೇವೆ ಅಂತಿದ್ದಾರೆ ಮಾಡ್ಲಿ. ನಾವು ಮಾಡಿರುವುದನ್ನು ನೋಡಲಿ. ಸೋಲಾರ್ ಪ್ಯಾನಲ್ ಮಾಡಿದ್ದೇನೆ, ರೈತರಿಗೆ ಪಂಪ್ ಕೊಟ್ಟಿದ್ದೇನೆ. ಪ್ರತಿ ಊರಿಗೆ ಕಾವೇರಿ ನೀರು ಕೊಟ್ಟಿದ್ದೇನೆ ಎಂದು ಹೇಳುವ ಮೂಲಕ ಬಿಜೆಪಿ ನಾಯಕರಿಗೆ ತಿರುಗೇಟು ಕೊಟ್ಟರು.