ಬ್ಯಾಡಗಿ ಸುಂದರಿಗೆ ಚಿನ್ನದ ಬೆಲೆ ಕ್ವಿಂಟಾಲ್ ಗೆ ೩೩೦೦೦ ಸಾವಿರ

ಚಿನ್ನದ ಬೆಲೆ ಬಂತು
ಬ್ಯಾಡಗಿ ಮೆಣಸಿಗೆ ; ಕ್ವಿಂಟಾಲ್‌ಗೆ 33 ಸಾವಿರ

ಹಾವೇರಿ, ಜನವರಿ 13 : ಈರುಳ್ಳಿ ಬಳಿಕ ಈಗ ಒಣ ಮೆಣಸಿನಕಾಯಿಗೆ ಚಿನ್ನದ ಬೆಲೆ ಬಂದಿದೆ. ವಿಶ್ವಪ್ರಸಿದ್ಧ ಹಾವೇರಿಯ ಬ್ಯಾಡಗಿ ಮೆಣಸಿನಕಾಯಿ ಕ್ವಿಂಟಾಲ್‌ಗೆ 33,333 ರೂ.ಗೆ ಮಾರಾಟವಾಗಿದ್ದು, ರೈತರು ಸಂತಸಗೊಂಡಿದ್ದಾರೆ.
ಕಳೆದ ಗುರುವಾರ ಗದಗ ಜಿಲ್ಲೆಯ ರೋಣದ ರೈತರೊಬ್ಬರು ಮೆಣಸಿನಕಾಯಿಯನ್ನು 33,259 ರೂ. ಗೆ ಮಾರಾಟ ಮಾಡಿದ್ದರು. ಇಂದು ಈ ದಾಖಲೆಯನ್ನು ಮುರಿದು ಹಾಕಲಾಗಿದ್ದು, ಉತ್ತಮ ಬೆಳೆಗೆ ಕೆಂಪು ಸುಂದರಿ ಮಾರಾಟವಾಗಿದ್ದಾಳೆ.
ಒಂದು ವಾರದಿಂದ ಬ್ಯಾಡಗಿ ಮೆಣಸಿನಕಾಯಿ ದರ ಏರಿಕೆಯಾಗುತ್ತಲೇ ಸಾಗಿದೆ. ಚಿಲ್ಲರೆ ಮಾರಾಟ ಅಂಗಡಿಗಳಲ್ಲಿ 50 ರೂ., ಸಗಟು ಮಾರಾಟ ಮಳಿಗೆಗಳಲ್ಲಿ 10 ರಿಂದ 20 ರೂ. ದರ ಹೆಚ್ಚಾಗಿದೆ ಎಂದು ಗ್ರಾಹಕರು ಹೇಳುತ್ತಿದ್ದಾರೆ.
ಸಾಮಾನ್ಯ ಮೆಣಸಿಗಿಂತ ಆಕಾರದಲ್ಲಿ ಉದ್ದವಾಗಿರುವ ಬ್ಯಾಡಗಿ ಮೆಣಸು ವಿಶ್ವಪ್ರಸಿದ್ಧಿ ಪಡೆದಿದೆ. ರಾಮನಗರದ ಗಿಡ್ಡ ಮೆಣಸು, ಗುಂಟೂರು ಒಣ ಮೆಣಸಿನ ಬೆಲೆಯೂ ಏರಿಕೆಯಾಗಿದೆ. ಮೆಣಸಿನ ಬೆಲೆ ಧಿಡೀರ್ ಏರಿಕೆಯಾಗಲಿ ಕಾರಣ ನಿಖರವಾಗಿ ತಿಳಿದುಬಂದಿಲ್ಲ.
ಹೊಸ ಮೆಣಸು ಮಾರುಕಟ್ಟೆಗೆ ಬರುವುದು ವಿಳಂಬವಾಗಿದೆ. ಆದ್ದರಿಂದ, ಒಂದು ವಾರದಿಂದ ಒಣ ಮೆಣಸಿನ ಬೆಲೆ ಹೆಚ್ಚಾಗುತ್ತಿದೆ. ಫೆಬ್ರವರಿ ಮೊದಲ ವಾರದಲ್ಲಿ ಹೊಸ ಮೆಣಸು ಬಂದರೆ ದರ ಕಡಿಮೆಯಾಗಬಹುದು ಎನ್ನುತ್ತಾರೆ ವರ್ತಕರು.