ಸರ್ಕಾರಿ ಜಮೀನಿನಲ್ಲಿ ಅಕ್ರಮವಾಗಿ ಮನೆ ಕಟ್ಟಿದ ಬಡವರಿಗೆ ರಾಜ್ಯ ಸರ್ಕಾರದಿಂದ ಭರ್ಜರಿ ಗಿಫ್ಟ್!
ಸರ್ಕಾರಿ ಜಮೀನಿನಲ್ಲಿ ಮನೆ ಕಟ್ಟಿರುವ ಬಡವರಿಗೆ ರಾಜ್ಯ ಸರ್ಕಾರ ಸಿಹಿ ಸುದ್ದಿ ಕೊಟ್ಟಿದೆ. ಅಕ್ರಮ ಸಕ್ರಮ ಯೋಜನೆಯಡಿ ಸರ್ಕಾರಿ ಜಮೀನಿನಲ್ಲಿ ಮನೆ ಕಟ್ಟಿರುವ ಬಡವರಿಗೆ ಹಕ್ಕು ಪತ್ರ ನೀಡಲು ನಿರ್ಧರಿಸಿದೆ.ಈ ಸಂಬಂಧ ಇಂದು ವಿಧಾನಸೌಧದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕಂದಾಯ ಸಚಿವ ಆರ್.ಅಶೋಕ್ ಅವರು, ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ ಪ್ರದೇಶದಲ್ಲಿ ಸರ್ಕಾರಿ ಜಮೀನಿನಲ್ಲಿ ಅಕ್ರಮವಾಗಿ ಕಟ್ಟಿಕೊಂಡಿದ್ದ ಮನೆಗಳನ್ನು ಸಕ್ರಮಗೊಳಿಸಲಾಗುವುದು. ಜ.28ಕ್ಕೆ ಬಸವನಗುಡಿ ನ್ಯಾಷನಲ್ ಕಾಲೇಜು ಮೈದಾನದಲ್ಲಿ ಕಾರ್ಯಕ್ರಮ ಹಮ್ಮಿಕೊಂಡಿದ್ದು, ಅಲ್ಲಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ 10,000 ಬಡವರಿಗೆ ಹಕ್ಕು ಪತ್ರ ವಿತರಿಸಲಿದ್ದಾರೆ ಎಂದು ತಿಳಿಸಿದರು.
20x30, 30x40 ಅಳತೆಯಲ್ಲಿ ಕಟ್ಟಿರುವ ಮನೆಗಳ ಮಾಲೀಕರಿಗೆ ಮಾತ್ರ ಕ್ರಯಪತ್ರ ಮಾಡಿಕೊಡಲಾಗುವುದು. 30 ವರ್ಷದಿಂದ ಸರ್ಕಾರಿ ಜಮೀನಿನಲ್ಲಿ ಮನೆ ಕಟ್ಟಿರುವ ಬಡವರಿಗೆ ಈ ಅಕ್ರಮ ಸಕ್ರಮ ಯೋಜನೆ ಅನ್ವಯವಾಗಲಿದೆ. 1.1.2012 ಮುನ್ನ ಮನೆ ಕಟ್ಟಿರುವವರಿಗೆ ಮಾತ್ರ ಹಕ್ಕು ಪತ್ರ ದೊರೆಯಲಿದೆ ಎಂದು ತಿಳಿಸಿದರು.ರಾಜ್ಯಾದ್ಯಂತ ಸಮರೋಪಾದಿಯಲ್ಲಿ ಬಡವರಿಗೆ ಅಕ್ರಮ ಸಕ್ರಮ ಯೋಜನೆಯಡಿ ಹಕ್ಕುಪತ್ರ ವಿತರಣೆ ಮಾಡಲಾಗುತ್ತಿದೆ. ವಾರ್ಷಿಕ ಆದಾಯವನ್ನು ಪರಿಗಣಿಸಿ ಬಡವರೆಂದು ಗುರುತಿಸಿ ಹಕ್ಕುಪತ್ರ ವಿತರಿಸಲಾಗುವುದು. 94 ಸಿ ಮತ್ತು 94 ಸಿಸಿ ಕಾಯ್ದೆಯಡಿ ಬಡವರಿಗೆ ಹಕ್ಕು ಪತ್ರ ನೀಡುತ್ತೇವೆ ಎಂದರು.
ಯಾರಿಗೆ ಎಷ್ಟು ಶುಲ್ಕ
20*30 ಅಳತೆಯ ಮನೆಗಳಿಗೆ ಹಕ್ಕುಪತ್ರ ಪಡೆಯಲು ಎಸ್ ಸಿ, ಎಸ್ ಟಿ ವರ್ಗದವರು 2,500 ರೂ. ನೋಂದಣಿ ಶುಲ್ಕ ನೀಡಬೇಕು. ಸಾಮಾನ್ಯ ವರ್ಗ 5 ಸಾವಿರ ರೂ. ಶುಲ್ಕ ಪಾವತಿಸಬೇಕು.30*40 ನಿವೇಶನಗಳ ಮನೆಗಳಿಗೆ ಹಕ್ಕುಪತ್ರ ಪಡೆಯಲು ಎಸ್ ಸಿ, ಎಸ್ ಟಿ ವರ್ಗದವರು 5,000 ರೂ., ಸಾಮಾನ್ಯ ವರ್ಗದವರು 10,000 ರೂ. ಶುಲ್ಕ ಪಾವತಿಸಬೇಕು.